ವಾಷಿಂಗ್ಟನ್ ಡಿಸಿ, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ಅವರು ನನಗಿಂತ ಹೆಚ್ಚು ಕಠಿಣ ಸಂಧಾನಕಾರ ಅಷ್ಟೇ ಅಲ್ಲ ಸ್ಪರ್ಧೆ ಕೂಡಾ ಇಲ್ಲದಂತೆ ಮಾಡುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಇಬ್ಬರಲ್ಲಿ ಯಾರು ಕಠಿಣ ಸಂಧಾನಕಾರರು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಅವರು (ಪ್ರಧಾನಿ ನರೇಂದ್ರ ಮೋದಿ) ನನಗಿಂತ ಹೆಚ್ಚು ಕಠಿಣ ಸಂಧಾನಕಾರರು ಮತ್ತು ಅವರು ನನಗಿಂತ ಉತ್ತಮ ಸಂಧಾನಕಾರರು, ಸ್ಪರ್ಧೆ ಕೂಡ ಇಲ್ಲದಂತೆ ಮಾಡುತ್ತಾರೆ ಎಂದು ಉತ್ತರ ಕೊಟ್ಟರು.
![PM Modi much tougher negotiator than me, there is not even contest](https://etvbharatimages.akamaized.net/etvbharat/prod-images/14-02-2025/ani-20250214005211_1402a_1739494393_721.jpg)
ಐಎಂಇಸಿ ಕಾರಿಡಾರ್ : ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ನಿರ್ಮಾಣಕ್ಕೆ ಭಾರತ ಮತ್ತು ಯುಎಸ್ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ ಎಂದು ಟ್ರಂಪ್ ಇದೇ ವೇಳೆ ಘೋಷಿಸಿದ್ದಾರೆ. ಶ್ರೇಷ್ಠ ವ್ಯಾಪಾರ ಮಾರ್ಗಗಳಲ್ಲಿ ಇದು ಒಂದಾಗಿದೆ ಎಂದು ಬಣ್ಣಿಸಿದ್ದಾರೆ. ಈ ಮಾರ್ಗವು ಇಸ್ರೇಲ್‌ನಿಂದ ಇಟಲಿಗೆ ಮತ್ತು ಮುಂದೆ ಅಮೆರಿಕಕ್ಕೆ ಕೆಲಸ ಮಾಡಲಿದೆ ಎಂದರು.
ಇತಿಹಾಸದ ಶ್ರೇಷ್ಠ ವ್ಯಾಪಾರ ಮಾರ್ಗಗಳಲ್ಲಿ ಒಂದನ್ನು ನಿರ್ಮಿಸಲು ನಾವು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ. ಇದು ಭಾರತದಿಂದ ಇಸ್ರೇಲ್‌ಗೆ ಇಟಲಿಗೆ ಮತ್ತು ಮುಂದೆ ಅಮೆರಿಕಕ್ಕೆ ಸಂಪರ್ಕ ಕಲ್ಪಿಸಲಿದೆ. ರಸ್ತೆ , ರೈಲ್ವೆ ಮತ್ತು ಸಮುದ್ರದೊಳಗಿನ ಕೇಬಲ್‌ಗಳ ಸಂಪರ್ಕಕ್ಕೆ ಇದು ಅನುಕೂಲ ಮಾಡಿಕೊಡಲಿದೆ. ಈ ಮೂಲಕ ಅತಿದೊಡ್ಡ ಅಭಿವೃದ್ಧಿಗೆ ವೇದಿಕೆ ಮಾಡಿಕೊಡಲಿದೆ. ನಾವು ಈಗಾಗಲೇ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ಇಂದಿನ ಪ್ರಕಟಣೆಗಳೊಂದಿಗೆ ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹವು ಮತ್ತಷ್ಟು ಬಲಗೊಂಡಿದೆ ಎಂದು ಹೇಳಲು ನಾನು ಹರ್ಷ ವ್ಯಕ್ತಪಡಿಸುತ್ತೇನೆ ಎಂದರು. ಅಷ್ಟೇ ಅಲ್ಲ ಉಭಯ ನಾಯಕರ ನಡುವಣ ಬಾಂಧವ್ಯ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
![PM Modi much tougher negotiator than me, there is not even contest](https://etvbharatimages.akamaized.net/etvbharat/prod-images/14-02-2025/23540118_trump.jpg)
ಏನಿದು ಐಎಂಇಸಿ?: IMEC ಭಾರತವನ್ನು ಗಲ್ಫ್ ಪ್ರದೇಶಕ್ಕೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಗಲ್ಫ್ ಪ್ರದೇಶವನ್ನು ಯುರೋಪ್ಗೆ ಸಂಪರ್ಕಿಸುವ ಉತ್ತರ ಕಾರಿಡಾರ್ ಒಳಗೊಂಡಿದೆ. ಇದು ರೈಲ್ವೆ ಮತ್ತು ಹಡಗು - ರೈಲು ಸಾರಿಗೆ ಜಾಲ ಮತ್ತು ರಸ್ತೆ ಸಾರಿಗೆ ಮಾರ್ಗಗಳನ್ನು ಒಳಗೊಂಡಿರುತ್ತದೆ. 2023ರಲ್ಲಿ ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುಎಇ, ಯುರೋಪಿಯನ್ ಯೂನಿಯನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿಗಳು ಐಎಂಇಸಿ ಕುರಿತು ತಿಳಿವಳಿಕೆ ಪತ್ರ ಎಂಒಯುಗೆ ಸಹಿ ಹಾಕಿದ್ದವು.
ಎಫ್ 35 35 ಸ್ಟೆಲ್ತ್ ಫೈಟರ್ ಪೂರೈಸಲು ಒಪ್ಪಂದ; ಭಾರತಕ್ಕೆ ಅಮೆರಿಕ ತನ್ನ ಮಿಲಿಟರಿ ಮಾರಾಟವನ್ನು ಹೆಚ್ಚಿಸಲಿದೆ ಮತ್ತು ಅಂತಿಮವಾಗಿ ಎಫ್ 35 ಸ್ಟೆಲ್ತ್ ಫೈಟರ್‌ಗಳನ್ನು ಒದಗಿಸಲು ದಾರಿ ಮಾಡಿಕೊಡಲಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಕ್ವಾಡ್ ಪಾಲುದಾರಿಕೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಈ ವರ್ಷದಿಂದ ನಾವು ಭಾರತಕ್ಕೆ ಅನೇಕ ಶತಕೋಟಿ ಡಾಲರ್‌ಗಳಷ್ಟು ಮಿಲಿಟರಿ ಮಾರಾಟವನ್ನು ಹೆಚ್ಚಿಸುತ್ತೇವೆ. ನಾವು ಅಂತಿಮವಾಗಿ ಭಾರತಕ್ಕೆ ಎಫ್ 35 ಸ್ಟೆಲ್ತ್ ಫೈಟರ್‌ಗಳನ್ನು ಒದಗಿಸಲು ಸಿದ್ಧರಾಗಿದ್ಧೇವೆ. 2017 ರಲ್ಲಿ ನನ್ನ ಆಡಳಿತವು ಕ್ವಾಡ್ ಭದ್ರತಾ ಪಾಲುದಾರಿಕೆ ಪುನರುಜ್ಜೀವನಗೊಳಿಸಿ, ಪುನಶ್ಚೇತನಗೊಳಿಸಿತ್ತು. ಮೋದಿ ಮತ್ತು ನಾನು ನಿಜವಾಗಿಯೂ ಅಮೆರಿಕ ಮತ್ತು ಜಪಾನ್ ನಡುವೆ ಬಲವಾದ ಸಹಕಾರವನ್ನು ಪುನರುಚ್ಚರಿಸುತ್ತೇವೆ. ಭಾರತ, ಜಪಾನ್ ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ- ಸಮೃದ್ಧಿಯನ್ನು ಉಂಟು ಮಾಡುತ್ತೇವೆ ಎಂದು ಟ್ರಂಪ್ ಪ್ರಕಟಿಸಿದರು.
ಮತ್ತಷ್ಟು ಇಂಧನ ಆಮದು ಒಪ್ಪಂದ ಮತ್ತು ವ್ಯಾಪಾರ ಮಾರ್ಗಗಳ ಒಪ್ಪಂದಗಳನ್ನು ಅಮೆರಿಕ ಅಧ್ಯಕ್ಷರು ಇದೇ ವೇಳೆ ಘೋಷಿಸಿದರು. ಪ್ರಧಾನಿ ಮತ್ತು ನಾನು ಇಂಧನದ ಬಗ್ಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದ್ದೇವೆ, ಅದು ಭಾರತಕ್ಕೆ ಅಮೆರಿಕ ತೈಲ ಮತ್ತು ನೈಸರ್ಗಿಕ ಅನಿಲದ ಪ್ರಮುಖ ಪೂರೈಕೆದಾರನಾಗಲು ಅವಕಾಶ ಮಾಡಿಕೊಡುತ್ತದೆ. ಅಮೆರಿಕ ಪರಮಾಣು ಉದ್ಯಮದ ಹೊಸ ಬೆಳವಣಿಗೆಯಲ್ಲಿ ಭಾರತವು ಸಹಕಾರ ನೀಡಲು ಬದ್ಧವಾಗಿದ್ದು, ತನ್ನ ಕಾನೂನುಗಳನ್ನು ಸುಧಾರಿಸುತ್ತಿದೆ ಎಂದು ಟ್ರಂಪ್ ಹೇಳಿದರು.
ಇದನ್ನು ಓದಿ: ಟ್ರಂಪ್ - ಮೋದಿ ಮಹತ್ವದ ಮಾತುಕತೆ; 2030ರ ವೇಳೆಗೆ 500 ಶತಕೋಟಿ ಡಾಲರ್ ವ್ಯಾಪಾರದ ಗುರಿ!-MAGA-MIGA ಘೋಷಣೆ!