ಬೆಂಗಳೂರು: ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಜನನ ಮರಣ ಪ್ರಮಾಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮ ಮಗನ ಹೆಸರನ್ನು ಬದಲಾವಣೆಗೆ ಅವಕಾಶ ಕಲ್ಪಿಸಲು ಜನನ - ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಮಗುವಿನ ಪರವಾಗಿ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್‌ಗೌಡ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ಹೆಸರನ್ನು ನೋಂದಾಯಿಸಿದ ಬಳಿಕ ಅದನ್ನು ಪೋಷಕರು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಹಲವು ಹೆಸರುಗಳನ್ನು ಇಡುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಆದರೆ, ದಾಖಲೆಗಳು ಒಂದೇ ಹೆಸರನ್ನು ನಮೂದಿಸಿವುದಕ್ಕೆ ಅವಕಾಶವಿರುವುದರಿಂದ ಇದು ವ್ಯಕ್ತಿಯನ್ನು ಗುರುತಿಸುವುದಕ್ಕೆ ಕೆಲವು ಸಂದರ್ಭಗಳಲ್ಲಿ ಗೊಂದಲಗಳನ್ನುಂಟು ಮಾಡಲಿದೆ. ಈ ಸಂಬಂಧ ಶಾಸನಸಭೆ ಗಮನ ಹರಿಸಿ ನಾಗರಿಕರು ತಾವು ಬಯಸಿದ ಸಂದರ್ಭದಲ್ಲಿ ತಮ್ಮ ಹೆಸರುಗಳನ್ನು ಬದಲಾವಣೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳವ ರೀತಿಯಲ್ಲಿ ತಿದ್ದುಪಡಿ ಮಾಡಬೇಕು. ಜೊತಗೆ, ಹೆಸರು ಬದಲಾಯಿಸಿಕೊಳ್ಳುವವರ ದಾಖಲೆಗಳನ್ನು ಏಕ ಕಾಲಕ್ಕೆ ಬದಲಾವಣೆಗೆ ಅವಕಾಶ ನೀಡುವಂತಹ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಪೀಠ ಆದೇಶಿಸಿದೆ.
ರಾಜ್ಯ ಕಾನೂನು ಆಯೋಗ 2013ರ ಜುಲೈ 20ರಂದು ಸರ್ಕಾರಕ್ಕೆ ಸಲ್ಲಿಸಿರುವ 24ನೇ ವರದಿಯಲ್ಲಿನ ಶಿಫಾರಸುಗಳನ್ನು ಪರಿಗಣಿಸಿ ಕಾಯಿದೆಗೆ ತಿದ್ದುಪಡಿ ಮಾಡುವುದು ಸೂಕ್ತ ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ. ಅಲ್ಲದೇ, ಕಾಯಿದೆಯ ಪ್ರಕಾರ ಹೆಸರನ್ನು ತಿದ್ದುಪಡಿ ಮಾಡುವವರೆಗೂ ಪೋಷಕರು ತಮ್ಮ ಮಕ್ಕಳ ಹೆಸರನ್ನು ಬದಲಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಹೆಸರು ಬದಲಾವಣೆ ಕೋರಿ ಬರುವವರ ಕುರಿತಂತೆ ಕೈಗೊಳ್ಳಬೇಕಾದಂತಹ ಕ್ರಮಗಳ ಕುರಿತು ನ್ಯಾಯಪೀಠ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ಕಾಯಿದೆ ತಿದ್ದುಪಡಿಯಾಗುವವರೆಗೂ ಈ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಹೆಸರನ್ನು ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಪೀಠ ಹೇಳಿದೆ.
ಜನ್ಮ ದಿನಾಂಕ ಮತ್ತು ಇತರ ವಿವರಗಳು ಬದಲಾವಣೆ ಆಗದೆ ಹೆಸರು ಮಾತ್ರ ಬದಲಾದಲ್ಲಿ ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇಲ್ಲವಾಗಲಿದೆ. ಹೀಗಾಗಿ ಹೆಸರು ಬದಲಾಯಿಸಲು ಕೋರಿ ಬಂದ ಅರ್ಜಿಗಳನ್ನು ಅಂಗೀಕರಿಸಬೇಕು ಎಂದು ಪೀಠ ಹೇಳಿದೆ.
ಹೆಸರು ಬದಲಾವಣೆಗೆ ನೀಡಿರುವ ಪ್ರಮುಖ ನಿರ್ದೇಶನಗಳು:
- ಪೋಷಕರು ತಮ್ಮ ಮಗುವಿನ ಹೆಸರನ್ನು ಜನನ ಪ್ರಮಾಣ ಪತ್ರದಲ್ಲಿ ಬದಲಾಯಿಸಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ತರುವುದಕ್ಕೆ ಸೂಚಿಸುವುದು. ಅಂತಹ ಅರ್ಜಿಯನ್ನು ಅಧಿಕಾರಿಗಳು, ಪೋಷಕರ ಗುರುತನ್ನು ಪರಿಶೀಲಿಸಿ ಹೆಸರು ಬದಲಾವಣೆಗೆ ಮಾಡಲು ಕ್ರಮ ವಹಿಸುವುದು.
- ಈ ರೀತಿಯ ಅರ್ಜಿ ಬಂದಲ್ಲಿ ಯಾವುದೇ ದುರುದ್ದೇಶಪೂರ್ವಕವಾಗಿ ಹೆಸರು ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಂಡು ಹೆಸರನ್ನು ಬದಲಾವಣೆ ಮಾಡಿ ರಿಜಿಸ್ಟ್ರರ್‌ನಲ್ಲಿ ನಮೂದಿಸಬೇಕು. ಹೀಗಾದಲ್ಲಿ ಮೊದಲ ಹೆಸರು ಮತ್ತು ಬದಲಾವಣೆ ಹೆಸರು ರಿಜಿಸ್ಟ್ರಾರ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕಾಗುತ್ತದೆ.
- ವಯಸ್ಕರ ಹೆಸರು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಇದೇ ರೀತಿಯ ನಿಯಮಗಳನ್ನು ಅನುಸರಿಸಬೇಕು. ಆಗ ಹಳೆಯ ಮತ್ತು ಹೊಸ ಹೆಸರುಗಳು ರಿಜಿಸ್ಟ್ರಾರ್‌ನಲ್ಲಿ ಇರುವುದರಿಂದ ದುರುಪಯೋಗವನ್ನು ತಡೆಯಬಹುದಾಗಿದೆ ಎಂದ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಉಡುಪಿಯ ಪೋಷಕರು ಮೊದಲು ತಮ್ಮ ಮಗನಿಗೆ ಅಧ್ರಿತ್ ಭಟ್ ಎಂದು ನಾಮಕರಣ ಮಾಡಿದ್ದರು. ಆದರೆ ಈ ಹೆಸರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಹೀಗಾಗಿ ಮಗನ ಹೆಸರನ್ನು ಶ್ರೀಜಿತ್ ಭಟ್ ಎಂಬುದಾಗಿ ಬದಲಾವಣೆ ಮಾಡುವುದಕ್ಕೆ ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಜನನ ಮರಣ ನೋಂದಣಾಧಿಕಾರಿಗಳು ತಿರಸ್ಕರಿಸಿ ಹಿಂಬರಹ ನೀಡಿದ್ದರು. ಆದ್ದರಿಂದ ತಮ್ಮ ಮಗನ ಹೆಸರನ್ನು ಬದಲಾವಣೆ ಮಾಡುವುದಕ್ಕೆ ನಿರ್ದೇಶನ ನೀಡಲು ಸೂಚನೆ ನೀಡಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಪೀಠ ಬಾಲಕನ ಹೆಸರನ್ನು ಬದಲಾಯಿಸಿ ಜನನ ಪ್ರಮಾಣ ಪತ್ರವನ್ನು ನೀಡುವಂತೆ ನಿರ್ದೇಶನ ನೀಡಿ ಆದೇಶಿಸಿದೆ.
ಇದನ್ನೂ ಓದಿ: ನಿಗಮ, ಮಂಡಳಿಗಳ ಅಧ್ಯಕ್ಷರಾಗಿರುವ ಶಾಸಕರಿಗೂ ಸಂಪುಟ ದರ್ಜೆ ಸ್ಥಾನಮಾನ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ