ಕರಾಚಿ: ಕರಾಚಿ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಚೀನೀಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಚೀನಾದ ಪ್ರಜೆಗಳು ಸಾವನ್ನಪ್ಪಿರುವುದನ್ನು ಸೋಮವಾರ ದೃಢಪಡಿಸಿದ ಇಸ್ಲಾಮಾಬಾದ್ನಲ್ಲಿರುವ ಚೀನಾ ರಾಯಭಾರ ಕಚೇರಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಪೋರ್ಟ್ ಖಾಸಿಮ್ ಎಲೆಕ್ಟ್ರಿಕ್ ಪವರ್ ಕಂಪನಿ (ಪ್ರೈವೇಟ್) ಲಿಮಿಟೆಡ್ನಿಂದ ಚೀನಾದ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ ಅದನ್ನು ಸ್ಫೋಟಿಸಲಾಗಿದೆ. ಪಾಕಿಸ್ತಾನದ ಬಂದರು ನಗರ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸ್ಫೋಟದಿಂದ ಕನಿಷ್ಠ 7 ಜನರು ಗಾಯಗೊಂಡಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಪ್ರತ್ಯೇಕತಾವಾದಿ ಗುಂಪು ಈ ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪಾಕಿಸ್ತಾನದ ಅತಿದೊಡ್ಡ ಮತ್ತು ಜನನಿಬಿಡ ವಾಯುಯಾನ ಕೇಂದ್ರವಾದ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಎಂಜಿನಿಯರ್ಗಳು ಮತ್ತು ಹೂಡಿಕೆದಾರರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ಆತ್ಮಾಹುತಿ ದಾಳಿ: ಇದೊಂದು ಆತ್ಮಾಹುತಿ ದಾಳಿ ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ದೃಢಪಡಿಸಿದ್ದು, ಬಾಂಬರ್ನ ಹಿನ್ನೆಲೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. "ಚೀನಾದ ನಾಯಕತ್ವಕ್ಕೆ ಮತ್ತು ಚೀನಾದ ಜನರಿಗೆ ನನ್ನ ತೀವ್ರ ಸಂತಾಪಗಳು" ಎಂದು ಷರೀಫ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಮ್ಮ ಚೀನೀ ಸ್ನೇಹಿತರನ್ನು ರಕ್ಷಿಸಲು ಪಾಕಿಸ್ತಾನ ಬದ್ಧವಾಗಿದೆ. ಅವರ ಸುರಕ್ಷತೆ ಮತ್ತು ಯೋಗಕ್ಷೇಮದ ರಕ್ಷಣೆಗಾಗಿ ನಾವು ಅಗತ್ಯವಿರುವುದೆಲ್ಲವನ್ನೂ ಮಾಡುತ್ತೇವೆ" ಎಂದು ಅವರು ಬರೆದಿದ್ದಾರೆ.
ಕೆಲವೇ ದಿನಗಳಲ್ಲಿ ಇಸ್ಲಾಮಾಬಾದ್ನಲ್ಲಿ ಚೀನಾ ಮತ್ತು ರಷ್ಯಾ ನೇತೃತ್ವದ ಭದ್ರತಾ ಗುಂಪಿನ ಶಾಂಘೈ ಸಹಕಾರ ಸಂಘಟನೆಯ ಸರ್ಕಾರಗಳ ಮುಖ್ಯಸ್ಥರ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಕರಾಚಿಯಲ್ಲಿ ಆತ್ಮಾಹುತಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.
ನವೆಂಬರ್ 2018ರಲ್ಲಿ, ಕರಾಚಿಯಲ್ಲಿರುವ ಚೀನಾದ ದೂತಾವಾಸದ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ಬಿಎಲ್ಎ ವಹಿಸಿಕೊಂಡಿತ್ತು. ಅದಾಗಿ ಆರು ತಿಂಗಳ ನಂತರ ಬಂದರಿನಲ್ಲಿ ಕೆಲಸ ಮಾಡುವ ಚೀನೀ ಪ್ರಜೆಗಳು ಹೆಚ್ಚಾಗಿ ವಾಸಿಸುವ ಗ್ವಾದರ್ನ ಐಷಾರಾಮಿ ಹೋಟೆಲ್ ಮೇಲೆ ಬಿಎಲ್ಎ ದಾಳಿ ನಡೆಸಿತ್ತು. ಜೂನ್ 2020ರಲ್ಲಿ, ಬಿಎಲ್ಎ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಡೆದ ದಾಳಿಯ ಹೊಣೆಯನ್ನು ಸಹ ಹೊತ್ತುಕೊಂಡಿತ್ತು. ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಚೀನಾ ನೇತೃತ್ವದ ಒಕ್ಕೂಟವು ಶೇಕಡಾ 40ರಷ್ಟು ಪಾಲನ್ನು ಹೊಂದಿದೆ.
ಇದನ್ನೂ ಓದಿ: ಇಮ್ರಾನ್ ಖಾನ್ರ ಪಿಟಿಐ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರಾ ಜೈಶಂಕರ್? ಪಾಕಿಸ್ತಾನದಲ್ಲಿ ಆಗಿದ್ದೇನು? - Jaishankar Visits Pakistan