ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾಸೀನ್ ಬಂಧಿತ ಆರೋಪಿ. 19 ವರ್ಷದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಜಯನಗರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಜನವರಿ 17ರಂದು ಸಂಜೆ ಜಯನಗರದ 3ನೇ ಬ್ಲಾಕ್ ಬಸ್ ನಿಲ್ದಾಣದ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ, ಯುವತಿಯ ಬಳಿ ವಿಳಾಸ ಕೇಳಿದ್ದ. "ತನಗೆ ಗೊತ್ತಿಲ್ಲ" ಎಂದು ಯುವತಿ ಮುಂದೆ ಸಾಗಿದ್ದಳು. ಪುನಃ ಯುವತಿಯನ್ನ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ, ತನ್ನ ಮೊಬೈಲ್ ಫೋನ್‌ನಲ್ಲಿದ್ದ ಅಶ್ಲೀಲ ಚಿತ್ರವನ್ನ ಯುವತಿಗೆ ತೋರಿಸಿದ್ದ. ಗಾಬರಿಗೊಂಡ ಯುವತಿ ಅಲ್ಲಿಂದ ತೆರಳಿದ್ದಳು. ಒಂದು ವಾರದ ಮುನ್ನವೂ ಸಹ ಆರೋಪಿಯು ಅದೇ ರೀತಿ ಬಂದು ತನ್ನ ಬಳಿ ವಿಳಾಸ ಕೇಳಿದ್ದ ಎಂದು ಯುವತಿ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯು ತಿಲಕ್ ನಗರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಇದೇ ರೀತಿ ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಶಂಕೆಯಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಪಬ್‌ನಲ್ಲಿ ಡ್ರಿಂಕ್ ಆಫರ್ ತಿರಸ್ಕರಿಸಿದ ಯುವತಿಯೊಂದಿಗೆ ಅಸಭ್ಯ ವರ್ತನೆ: ಪ್ರಕರಣ ದಾಖಲು - INDECENT BEHAVIOR