ಭೋಪಾಲ್(ಮಧ್ಯ ಪ್ರದೇಶ): ತಂದೆಯ ಶವದ ಅಂತ್ಯಕ್ರಿಯೆ ನಡೆಸಲು ಇಬ್ಬರು ಸಹೋದರರು ಕಿತ್ತಾಡಿಕೊಂಡು, ಪ್ರತ್ಯೇಕ ಶವಸಂಸ್ಕಾರಕ್ಕಾಗಿ ಮೃತದೇಹವನ್ನು ಎರಡು ಭಾಗವಾಗಿ ತುಂಡರಿಸಲು ಬೇಡಿಕೆ ಇಟ್ಟ ವಿಚಿತ್ರ ಮತ್ತು ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ.
ಸಹೋದರರ ಹಠದಿಂದಾಗಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಾಜಿ ಪಂಚಾಯಿತಿ ನಡೆದು ಪೊಲೀಸರ ಸಮ್ಮುಖದಲ್ಲಿ ಸಹೋದರರು ಒಟ್ಟಾಗಿ ತಂದೆಯ ಶವಸಂಸ್ಕಾರ ಕಾರ್ಯ ಮುಗಿಸಿದ್ದಾರೆ.
ಘಟನೆಯ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮಧ್ಯ ಪ್ರದೇಶದ ಟಿಕಮ್‌ಗಢ ಜಿಲ್ಲೆಯ ಲಿಧೌರಾ ತಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ 85 ವರ್ಷದ ನಿವಾಸಿಯೊಬ್ಬರು ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಇಬ್ಬರು ಪುತ್ರರಿದ್ದರು. ಸಾವಿಗೂ ಮುನ್ನ ಅವರು ಕಿರಿಯ ಮಗನ ಜೊತೆ ವಾಸವಾಗಿದ್ದರು.
ಇತ್ತೀಚೆಗೆ ಅವರು ನಿಧನ ಹೊಂದಿದ್ದು, ಕಿರಿಯ ಪುತ್ರ ಅಂತ್ಯಕ್ರಿಯೆಗಾಗಿ ವ್ಯವಸ್ಥೆಗಳನ್ನು ಮಾಡಿದ್ದಾನೆ. ಈ ಸಮಯದಲ್ಲಿ, ಹಿರಿಯ ಪುತ್ರ ಸ್ಥಳಕ್ಕೆ ಆಗಮಿಸಿ, ತಂದೆಯ ಅಂತ್ಯಕ್ರಿಯೆಯನ್ನು ತಾನೇ ನಡೆಸುವುದಾಗಿ ಪಟ್ಟುಹಿಡಿದಿದ್ದಾನೆ. ಹಿರಿಯ ಮಗನಾಗಿರುವುದರಿಂದ ಆ ಹಕ್ಕು ತನಗಿದೆ ಎಂದು ವಾದಿಸಿದ್ದಾನೆ. ಆದರೆ, ಅವರ ಕಿರಿಯ ಪುತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ತಂದೆ ಕೊನೆಯ ಉಸಿರಿನವರೆಗೂ ತನ್ನ ಜೊತೆಗೆ ವಾಸವಿದ್ದ. ಅಂತ್ಯಕ್ರಿಯೆ ನಡೆಸುವ ಹಕ್ಕು ನನಗಿದೆ ಎಂದು ಹೇಳಿದ್ದಾನೆ. ಕೊನೆಯ ಕ್ಷಣದವರೆಗೂ ತಂದೆಯನ್ನು ನೋಡಿಕೊಂಡಿದ್ದು ನಾನು ಎಂದಿದ್ದಾನೆ.
ಮೃತದೇಹ ತುಂಡರಿಸುವ ಬೇಡಿಕೆ: ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರ ನಡುವೆ ತೀವ್ರ ವಾಗ್ವಾದ ನಡೆದಿದೆ. ಗ್ರಾಮಸ್ಥರು ಮತ್ತು ಸಂಬಂಧಿಕರು ಎಷ್ಟೇ ಮನವಿ ಮಾಡಿದರೂ ಇಬ್ಬರೂ ಒಪ್ಪಿಲ್ಲ. ತಂದೆಯ ಅಂತ್ಯಕ್ರಿಯೆ ಇಬ್ಬರೂ ನಡೆಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಹಿರಿಯ ಸಹೋದರ ತನ್ನ ತಂದೆಯ ಮೃತದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ ಪ್ರತ್ಯೇಕವಾಗಿ ಸಂಸ್ಕಾರ ಮಾಡಲು ಸಿದ್ಧನಿದ್ದೇನೆ ಎಂದು ಅತಿರೇಕದ ಮಾತನ್ನಾಡಿದ್ದಾನೆ.
ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ್ದರಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಸಹೋದರರ ಜೊತೆ ಸಂಧಾನ ನಡೆಸಿದ್ದಾರೆ. ಬಳಿಕ ಒಟ್ಟಾಗಿ ಅಂತ್ಯಕ್ರಿಯೆ ನಡೆಸಲು ಸಹೋದರರು ಒಪ್ಪಿಕೊಂಡಿದ್ದಾರೆ. ಪೊಲೀಸ್ ಭದ್ರತೆಯ ನಡುವೆ ಅಂತ್ಯಕ್ರಿಯೆ ಮುಗಿಸಲಾಯಿತು ಎಂದು ಜತಾರಾ ಪೊಲೀಸ್ ಠಾಣೆಯ ಅಧಿಕಾರಿ ಅರವಿಂದ್ ಸಿಂಗ್ ತಿಳಿಸಿದ್ದಾರೆ.