ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ ವಿರಾಮ ಜಾರಿಯಾದ ನಂತರ ಈಗ ವಿಶ್ವಸಂಸ್ಥೆ ಮತ್ತು ಅದರ ಸಹವರ್ತಿ ಸಂಘಟನೆಗಳ ಕಾರ್ಯಕರ್ತರು ಗಾಜಾ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ ಮನೆ ಮಠ ಕಳೆದುಕೊಂಡ ನಿರಾಶ್ರಿತರಾಗಿರುವ ಗಾಜಾ ಜನತೆಗಾಗಿರುವ ಹಾನಿಯ ಬಗ್ಗೆಯೂ ಕಾರ್ಯಕರ್ತರು ಲೆಕ್ಕ ಹಾಕುತ್ತಿದ್ದಾರೆ.
ಗಾಜಾ ಪಟ್ಟಿಯಾದ್ಯಂತದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸುತ್ತಿದ್ದೇವೆ. ಸರಕು ಶೇಖರಣಾ ಸಾಮರ್ಥ್ಯಗಳನ್ನು ಕೂಡ ಹೆಚ್ಚಿಸಲಾಗುತ್ತಿದ್ದು, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಸೇವೆಗಳನ್ನು ಸಹ ಸುಧಾರಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಬುಧವಾರ ತಿಳಿಸಿದೆ. ವಿಶ್ವಸಂಸ್ಥೆಯ ಕಾರ್ಯಕರ್ತರು ಆಹಾರದ ಪಾರ್ಸೆಲ್ಗಳು ಮತ್ತು ಹಿಟ್ಟನ್ನು ವಿತರಿಸುತ್ತಿದ್ದಾರೆ ಹಾಗೂ ಬೇಕರಿಗಳನ್ನು ಪುನಾರಂಭಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಜಾ ಜನತೆಗೆ ಸಹಾಯ ಮಾಡುವ ವಿಶ್ವಸಂಸ್ಥೆಯ ಪ್ರಯತ್ನಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಅವರು ದಿನನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
"ಯುದ್ಧ ಪೀಡಿತ ಹಾಗೂ ಯುದ್ಧ ಮುಗಿದ ಸಂದರ್ಭಗಳಲ್ಲಿ ಆ ಪ್ರದೇಶಗಳಲ್ಲಿನ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವುದು, ನೆಲಬಾಂಬ್ಗಳನ್ನು ತೆಗೆದು ಹಾಕುವುದು, ಇನ್ನೂ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವುದು ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವುದು ವಿಶ್ವಸಂಸ್ಥೆಯು ಸಾಮಾನ್ಯವಾಗಿ ಮಾಡುವ ಕೆಲಸಗಳಾಗಿವೆ" ಎಂದು ಹಕ್ ತಿಳಿಸಿದರು.
"ಅವುಗಳನ್ನು ಮೈನ್ ಆಕ್ಷನ್ ಸರ್ವಿಸ್, ಯುಎನ್ ಆಫೀಸ್ ಫಾರ್ ಪ್ರಾಜೆಕ್ಟ್ ಸರ್ವೀಸಸ್ ಮತ್ತು ಯುಎನ್ ಡೆವಲಪ್ ಮೆಂಟ್ ಪ್ರೋಗ್ರಾಂ ಸೇರಿದಂತೆ ವಿವಿಧ ಸಂಘಟನೆಗಳು ಈ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತವೆ" ಎಂದು ಅವರು ಮಾಹಿತಿ ನೀಡಿದರು.
ಕದನ ವಿರಾಮದ ಎರಡನೇ ದಿನದಂದು ಸುಮಾರು 1,000 ಟ್ರಕ್ಗಳು ಗಾಜಾವನ್ನು ಪ್ರವೇಶಿಸಿವೆ ಎಂದು ಪ್ಯಾಲೆಸ್ಟೈನ್ ನಿರಾಶ್ರಿತರ ವಿಶ್ವಸಂಸ್ಥೆಯ ಪರಿಹಾರ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ) ವರದಿ ಮಾಡಿದೆ. ಪರಿಹಾರ ಸಾಮಗ್ರಿ ತುಂಬಿದ ಸುಮಾರು 118 ಟ್ರಕ್ಗಳು ಖಾನ್ ಯೂನಿಸ್ನ ಸಮುದಾಯಗಳಿಗೆ ಮತ್ತು ದೇರ್ ಅಲ್ ಬಾಲಾಹ್ನಲ್ಲಿರುವ ಯುಎನ್ಆರ್ಡಬ್ಲ್ಯೂಎ ಆಶ್ರಯ ಶಿಬಿರಗಳಿಗೆ 53,000 ಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ತಲುಪಿಸಿವೆ.
ಸುರಕ್ಷಿತ ಜನನ, ತುರ್ತು ಪ್ರಸೂತಿ ಆರೈಕೆ, ಪ್ರಸವಾನಂತರದ ಕಿಟ್ಗಳು, ಗರ್ಭನಿರೋಧಕಗಳು ಮತ್ತು ಚಳಿಗಾಲದ ವಸ್ತುಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು 20 ಟ್ರಕ್ಗಳು ಮಂಗಳವಾರ ದೇರ್ ಅಲ್ ಬಾಲಾಹ್ಗೆ ತಲುಪಿಸಿವೆ ಮತ್ತು ಯುಎನ್ಎಫ್ಪಿಎ ಸಹಾಯವನ್ನು ಹೊತ್ತ ಇನ್ನೂ 20 ಟ್ರಕ್ಗಳು ಬುಧವಾರ ಉತ್ತರ ಗಾಜಾವನ್ನು ಪ್ರವೇಶಿಸಿವೆ ಎಂದು ಯುಎನ್ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ) ವರದಿ ಮಾಡಿದೆ.
ಇದನ್ನೂ ಓದಿ : ಗಾಜಾದಲ್ಲಿ ಕದನ ವಿರಾಮ: ಮತ್ತೆ ತಲೆ ಎತ್ತಲಿದೆಯಾ ಹಮಾಸ್?.. ಅವಲೋಕನ - ISRAEL HAMAS CEASEFIRE