ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರ ತಂದೆ ನೌರಂಗ್ ಯಾದವ್ ಅವರಿಂದು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟ ಅಥವಾ ಅವರ ತಂಡ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿದ್ದರೂ, ನೌರಂಗ್ ಅವರು ಕೆಲ ಸಮಯದಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ.
ನನ್ನ ತಂದೆ ನನ್ನ ಶಕ್ತಿ: ಈ ಹಿಂದೆ ರಾಜ್‌ಪಾಲ್ ಯಾದವ್ ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ, ತಂದೆಗಾಗಿ ಭಾವನಾತ್ಮಕ ಪೋಸ್ಟ್ ಒಂದನ್ನು ಅರ್ಪಿಸಿದ್ದರು. ಇಬ್ಬರು ಪರಸ್ಪರ ಅಪ್ಪಿಕೊಂಡಿರುವ ಸುಂದರ ಫೋಟೋ ಹಂಚಿಕೊಂಡ ಅವರು, "ನನ್ನ ತಂದೆ ನನ್ನ ಜೀವನದ ಅತಿದೊಡ್ಡ ಪ್ರೇರಕ ಶಕ್ತಿ. ನನ್ನ ಮೇಲೆ ನೀವು ನಂಬಿಕೆ ಇಡದಿದ್ದರೆ, ನಾನು ಈ ಸ್ಥಾನಕ್ಕೆ ಏರುತ್ತಿರುಲಿಲ್ಲ. ನನ್ನ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು, ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದರು.
ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಆಘಾತ: ರಾಜ್‌ಪಾಲ್ ಯಾದವ್ ಅವರು ಇತ್ತೀಚೆಗಷ್ಟೇ ಕೊಲೆ ಬೆದರಿಕೆ ಸ್ವೀಕರಿಸಿದ್ದರು. ಆತಂಕದ ವಾತಾವರಣದಲ್ಲಿ ನಟನಿಗೆ ಮತ್ತೊಂದು ಆಘಾತ ಎಂಬಂತೆ ತಂದೆ ನೌರಂಗ್ ಯಾದವ್ ನಿಧನರಾಗಿದ್ದಾರೆ. ಈ ಸವಾಲಿನ ಸಂದರ್ಭದಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಮೂಲಕ ನಟನಿಗೆ ಧೈರ್ಯ ತುಂಬುತ್ತಿದ್ದಾರೆ.
ಬೆದರಿಕೆ... ರಾಜ್‌ಪಾಲ್ ಯಾದವ್ ಅವರಿಗೆ ಇಮೇಲ್ ಮೂಲಕ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿವೆ. ಡಿಸೆಂಬರ್ 14, 2024ರಂದು ವಿಷ್ಣು ಎಂಬ ವ್ಯಕ್ತಿಯಿಂದ ನಟನಿಗೆ ಇಮೇಲ್ ಬಂದಿತ್ತು. ಆ ಮೆಸೇಜ್ನಲ್ಲಿ, ಕೊಲೆ ಬೆದರಿಕೆ ಇತ್ತು ಎನ್ನಲಾಗಿದೆ. don99284@gmail.com ಇಮೇಲ್ ವಿಳಾಸದಿಂದ ರಾಜ್‌ಪಾಲ್ ಯಾದವ್ ಅವರ ತಂಡದ ಇಮೇಲ್ ಅಕೌಂಟ್ teamrajpalyadav@gmail.comಗೆ ಥ್ರೆಟ್ ಮೆಸೇಜ್ ಕಳುಹಿಸಲಾಗಿದೆ. ಈ ವಿಷಯ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಾಸ್ಯ ನಟರಾದ ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್ಗೂ ಬಂತು ಬೆದರಿಕೆ ಸಂದೇಶ!
ಘಟನೆ ಬಳಿಕ, ಯಾದವ್ ಪತ್ನಿ ರಾಧಾ ರಾಜ್‌ಪಾಲ್ ಯಾದವ್ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಬೋಲಿ ಪೊಲೀಸರು ಸೆಕ್ಷನ್ 351(3) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆದರಿಕೆ ಮತ್ತು ದುರುದ್ದೇಶಪೂರಿತ ಇಮೇಲ್‌ನ ಹಿಂದಿರುವ ವ್ಯಕ್ತಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 500 ರೂ. ಸಂಬಳ ಪಡೆಯುತ್ತಿದ್ದವರೀಗ 300 ಕೋಟಿಯ ಮಾಲೀಕ: ಭಾರತದ 2ನೇ ಶ್ರೀಮಂತ ಹಾಸ್ಯನಟನಿಗೆ ಕೊಲೆ ಬೆದರಿಕೆ
ಬಾಲಿವುಡ್ನ ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿರುವ ರಾಜ್‌ಪಾಲ್ ಯಾದವ್ ಕೊನೆಯದಾಗಿ ಭೂಲ್ ಭುಲೈಯ್ಯಾ 3ರಲ್ಲಿ ಕಾಣಿಸಿಕೊಂಡರು. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಮತ್ತು ತೃಪ್ತಿ ದಿಮ್ರಿ ಸೇರಿ ಇತರರು ನಟಿಸಿದ್ದಾರೆ.