ಮಾಸ್ಕೋ (ರಷ್ಯಾ):ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದ್ದು, ಸಾವು- ನೋವುಗಳಿಗೆ ಅಂತ್ಯವಿಲ್ಲವಾಗಿದೆ. ರಷ್ಯಾದ ಮೇಲೆ ಉಕ್ರೇನ್ 158 ಡ್ರೋನ್ ದಾಳಿ ನಡೆಸಿದ್ದು, ಎಲ್ಲವನ್ನೂ ಹೊಡೆದುರುಳಿಸಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಇತ್ತ, ರಷ್ಯಾದ ಡ್ರೋನ್ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿದ್ದಾಗಿ ಉಕ್ರೇನ್ ತಿಳಿಸಿದೆ.
ರಷ್ಯಾದ ತೈಲ ಸಂಸ್ಕರಣಾ ಘಟಕ, ಟರ್ಮಿನಲ್ಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಡ್ರೋನ್ ದಾಳಿ ನಡೆಸುತ್ತಿದೆ. ಅದರಂತೆ ಶನಿವಾರವೂ ಕೂಡ ಒಂದೇ ಬಾರಿಗೆ 158 ಡ್ರೋನ್ಗಳ ದಂಡನ್ನು ದಾಳಿಗೆ ಕಳುಹಿಸಿದೆ. ರಷ್ಯಾದ ವಾಯುಪಡೆಯು ಇವುಗಳನ್ನು ಕಂಡು ನಾಶ ಮಾಡಿದೆ.
ರಾಜಧಾನಿ ಮಾಸ್ಕೊದಲ್ಲಿ 2, ರಾಜಧಾನಿಯ ಹೊರಭಾಗದಲ್ಲಿ 9, ಕುರ್ಸ್ಕ್ ಪ್ರದೇಶದಲ್ಲಿ 46, ಬ್ಯ್ರಾನ್ಸ್ಕ್ನಲ್ಲಿ 34, ವೊರೊನೆಜ್ನಲ್ಲಿ 28, ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬೆಲ್ಗೊರೊಡ್ ಪ್ರದೇಶದ ಮೇಲೆ 14 ಡ್ರೋನ್‌ಗಳನ್ನು ಹಾರಿಸಲಾಯಿತು. ಅವೆಲ್ಲವನ್ನೂ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಹೊಡೆದುರುಳಿಸಲಾದ ಡ್ರೋನ್ಗಳ ಅವಶೇಷಗಳು ಬಿದ್ದ ಕಾರಣ, ನಗರದ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ನಿಯಂತ್ರಣದಲ್ಲಿದೆ ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.