ಢಾಕಾ: ಡಿಸೆಂಬರ್ ವೇಳೆಗೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಸಿದ್ಧತೆಗಳು ಆರಂಭಗೊಂಡಿವೆ ಎಂದು ಬಾಂಗ್ಲಾದೇಶದ ಚುನಾವಣಾ ಆಯೋಗ ಮಂಗಳವಾರ ಹೇಳಿದೆ. ಕಳೆದ ಒಂದು ವಾರದಿಂದ ದೇಶಾದ್ಯಂತ ಮತ್ತೆ ಹಿಂಸಾಚಾರ ಭುಗಿಲೆದ್ದಿರುವುದರಿಂದ ಚುನಾವಣೆ ನಡೆಸುವ ಪ್ರಸ್ತಾಪಕ್ಕೆ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅನಿವಾರ್ಯವಾಗಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ ಹೊತ್ತಿಗೆ ಚುನಾವಣೆ ನಡೆಸುವುದಾಗಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ)ಗೆ ಯೂನುಸ್ ಭರವಸೆ ನೀಡಿದ ಒಂದು ದಿನದ ನಂತರ ಚುನಾವಣಾ ಆಯೋಗವು ಈ ಹೇಳಿಕೆ ನೀಡಿದೆ.
ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಚುನಾವಣಾ ಆಯುಕ್ತ ಅಬುಲ್ ಫಜಲ್ ಮೊಹಮ್ಮದ್ ಸನಾವುಲ್ಲಾ ಸುದ್ದಿಗಾರರಿಗೆ ತಿಳಿಸಿದರು. ವಿಶ್ವಸಂಸ್ಥೆ, ಯುರೋಪಿಯನ್ ಯೂನಿಯನ್ (ಇಯು) ಪ್ರತಿನಿಧಿಗಳು ಹಾಗೂ 17 ಪಾಶ್ಚಿಮಾತ್ಯ ಮತ್ತು ಇತರ ದೇಶಗಳ ರಾಜತಾಂತ್ರಿಕರೊಂದಿಗೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ಸರ್ಕಾರ ನೇಮಿಸಿದ ಆಯೋಗವು ಪ್ರಸ್ತಾಪಿಸಿದಂತೆ ಸ್ಥಳೀಯ ಸರ್ಕಾರಗಳ ಚುನಾವಣೆಗಳ ಬದಲು, ರಾಷ್ಟ್ರೀಯ ಚುನಾವಣೆ ನಡೆಸುವುದು ನಮ್ಮ ಆದ್ಯತೆಯಾಗಿದೆ ಎಂದು ರಾಜತಾಂತ್ರಿಕರಿಂದ ಸುತ್ತುವರೆದಿದ್ದ ಸನಾವುಲ್ಲಾ ಹೇಳಿದರು.
"ಮುಖ್ಯ ಸಲಹೆಗಾರ ಯೂನುಸ್ ಈ ಹಿಂದೆ ಎರಡು ಗಡುವುಗಳನ್ನು ನೀಡಿದ್ದರು. ಅದರಲ್ಲಿ ಮೊದಲಿನ ಗಡುವಿನೊಳಗೆ ಚುನಾವಣೆ ನಡೆಸಲು ನಾವು ತಯಾರಿ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿಶ್ವಸಂಸ್ಥೆಯ ನಿವಾಸಿ ಪ್ರತಿನಿಧಿ ಸ್ಟೀಫನ್ ಲಿಲ್ಲರ್, ಬಾಂಗ್ಲಾದೇಶದಲ್ಲಿ ಮುಂಬರುವ ಚುನಾವಣೆಗಳು ಪಾರದರ್ಶಕವಾಗಿರಲಿವೆ ಎಂದು ವಿಶ್ವಸಂಸ್ಥೆ ನಿರೀಕ್ಷಿಸಿದೆ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ನಾವು ಚುನಾವಣಾ ಆಯೋಗವನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದರು. ಆದರೆ ಮುಕ್ತ ಚುನಾವಣೆ ನಡೆಸಲು ಇರುವ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ, ಆ ವಿಷಯದ ಬಗ್ಗೆ ಮಾತನಾಡುವುದು ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ ಎಂದರು.
ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳ ಕಾರಣಗಳನ್ನು ಉಲ್ಲೇಖಿಸಿ ಪಕ್ಷದ ಬೇಡಿಕೆಯ ಪ್ರಕಾರ ಡಿಸೆಂಬರ್ ವೇಳೆಗೆ ಚುನಾವಣೆಗಳನ್ನು ನಡೆಸುವುದಾಗಿ ಮುಖ್ಯ ಸಲಹೆಗಾರ ಯೂನುಸ್ ಸೋಮವಾರ ಖಲೀದಾ ಜಿಯಾ ಅವರ ಬಿಎನ್ಪಿಗೆ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿ ಚಳವಳಿಯ ನೇತೃತ್ವದ ನಡೆದ ಕ್ಷಿಪ್ರ ದಂಗೆಯ ನಂತರ ಆಗಿನ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಆಡಳಿತವನ್ನು ಪದಚ್ಯುತಗೊಳಿಸಿದ ಮೂರು ದಿನಗಳ ನಂತರ, ಆಗಸ್ಟ್ 8, 2024 ರಂದು ಯೂನುಸ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಆಪರೇಷನ್ ಡೆವಿಲ್ ಹಂಟ್' ಮೂಲಕ 1,308 ಜನರ ಬಂಧನ: 'ಎಲ್ಲಾ ದೆವ್ವ'ಗಳನ್ನು ಕಿತ್ತೊಗೆಯುವ ಪಣ ತೊಟ್ಟ ಬಾಂಗ್ಲಾ