ಜಾರ್ಜ್ಟೌನ್: ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತದಲ್ಲಿ ಗಯಾನಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ 'ದಿ ಆರ್ಡರ್ ಆಫ್ ಎಕ್ಸಲೆನ್ಸ್' ನೀಡಿ ಗೌರವಿಸಲಾಯಿತು. ಗಯಾನೀಸ್ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಜಾಗತಿಕ ಸಮುದಾಯಕ್ಕೆ ನೀಡಿದ ಅಸಾಧಾರಣ ಸೇವೆ, ರಾಜನೀತಿಜ್ಞತೆ ಮತ್ತು ಭಾರತ-ಗಯಾನಾ ಸಂಬಂಧಗಳನ್ನು ಬಲಗೊಳಿಸಲು ನೀಡಿದ ಕೊಡುಗೆಗಾಗಿ ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮಾಹಿತಿಯನ್ನು ಹಂಚಿಕೊಂಡ ಹಂಚಿಕೊಂಡ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್, ಇದು ಭಾರತಕ್ಕೆ ಮತ್ತೊಂದು ಗರಿ ಎಂದು ಬಣ್ಣಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ, ಪಿಎಂ ಮೋದಿ ತಮ್ಮ ಸ್ನೇಹಿತ ಗಯಾನೀಸ್ ಅಧ್ಯಕ್ಷ ಅಲಿ ಅವರಿಗೆ ಧನ್ಯವಾದ ಅರ್ಪಿಸಿದರು. ಇದು ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ರಾಷ್ಟ್ರದ ಬಲವಾದ ಬಾಂಧವ್ಯಕ್ಕೆ ಪುರಾವೆಯಾಗಿದೆ ಮತ್ತು ಇದು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಸಾಗಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
"ಭಾರತ-ಗಯಾನಾ ಸಂಬಂಧಗಳು ನಮ್ಮ ಒಂದೇ ರೀತಿಯ ಇತಿಹಾಸ, ಸಾಂಸ್ಕೃತಿಕ ಪರಂಪರೆ ಮತ್ತು ಆಳವಾದ ಪರಸ್ಪರ ನಂಬಿಕೆಯನ್ನು ಆಧರಿಸಿವೆ. ಅಧ್ಯಕ್ಷ ಇರ್ಫಾನ್ ಅಲಿ ಈ ಸಂಬಂಧಗಳನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ವೈಯಕ್ತಿಕವಾಗಿ ಕೊಡುಗೆ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ನಾವು ಪ್ರತಿಯೊಂದು ದಿಕ್ಕಿನಲ್ಲಿಯೂ ನಿರಂತರವಾಗಿ ಮುನ್ನಡೆಯುತ್ತಿದ್ದೇವೆ. ಇಂದಿನ ಚರ್ಚೆಗಳಲ್ಲಿಯೂ, ಭಾರತದ ಜನರ ಬಗ್ಗೆ ಅವರ ಪ್ರೀತಿ ಮತ್ತು ಗೌರವಗಳು ವ್ಯಕ್ತವಾಗಿವೆ" ಎಂದು ಪ್ರಧಾನಿ ನುಡಿದರು.