ವಾಷಿಂಗ್ಟನ್(ಅಮೆರಿಕ): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಮುಂದುವರೆದಿವೆ. ಈ ನಡುವೆ ಅಮೆರಿಕ ಧಾರ್ಮಿಕ ಮತ್ತು ಮೂಲಭೂತ ಮಾನವ ಹಕ್ಕುಗಳು ಸೇರಿದಂತೆ ಮೂಲ ಸ್ವಾತಂತ್ರ್ಯಗಳನ್ನು ಗೌರವಿಸುವಂತೆ ಬಾಂಗ್ಲಾಕ್ಕೆ ಕರೆ ನೀಡಿದೆ.
"ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದೆ. ನಾವು ಸಂಬಂಧ ಹೊಂದಿರುವ ಪ್ರತಿಯೊಂದು ಸರ್ಕಾರದೊಂದಿಗೆ ಸ್ಥಿರವಾಗಿರುತ್ತೇವೆ. ಮೂಲಭೂತ ಸ್ವಾತಂತ್ರ್ಯಗಳನ್ನು ಗೌರವಿಸುವ ಅಗತ್ಯವಿದೆ ಎಂಬುದು ನಮಗೆ ಸ್ಪಷ್ಟವಾಗಿದೆ" ಎಂದು ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು "ಸರ್ಕಾರಗಳು ಕಾನೂನಿನ ನಿಯಮವನ್ನು ಗೌರವಿಸಬೇಕು, ಅದರ ಭಾಗವಾಗಿ ಅವರು ಮೂಲಭೂತ ಮಾನವ ಹಕ್ಕುಗಳನ್ನು ಗೌರವಿಸಬೇಕು. ನಾವು ಈ ಬಗ್ಗೆ ಒತ್ತು ನೀಡುವುದನ್ನು ಮುಂದುವರಿಸುತ್ತೇವೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಮಾನವ ಹಕ್ಕುಗಳಿಗೆ ಗೌರವದ ಅಗತ್ಯವಿದೆ. ಯಾವುದೇ ರೀತಿಯ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಮತ್ತು ಅದರಂತೆ ನಡೆಯಬೇಕು. ಬಂಧನದಲ್ಲಿರುವವರಿಗೆ ಸಹ ಸೂಕ್ತ ಪ್ರಾತಿನಿಧ್ಯ ನೀಡಬೇಕು" ಎಂದು ಅವರು ಒತ್ತಿ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೊಳಿಸಿದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿವೆ.
ಹಿಂದೂಗಳ ಮೇಲೆ ಬಾಂಗ್ಲಾದೇಶದಲ್ಲಿ ಹೆಚ್ಚಿನ ದಾಳಿಗಳು ಮುಂದುವರೆದಿವೆ. ಇನ್ನು ಬಾಂಗ್ಲಾದಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರಗಳು ಹೆಚ್ಚುತ್ತಿವೆ.
ಇದನ್ನೂ ಓದಿ: ಬಾಂಗ್ಲಾ ಹಿಂದೂ ನಾಯಕ ಕೃಷ್ಣದಾಸ್‌ಗಿಲ್ಲ ಜಾಮೀನು; ದಾಳಿ ಭೀತಿಯಿಂದ ವಾದ ಮಂಡಿಸಲು ವಕೀಲರ ಹಿಂದೇಟು