ಶ್ರೀನಗರ: ಇಡೀ ಕಾಶ್ಮೀರ ಕಣಿವೆಯು ಶೀತಗಾಳಿಯಿಂದ ಆವೃತವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ಕನಿಷ್ಠ ತಾಪಮಾನ ಮೈನಸ್ 2 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಹವಾಮಾನ ಇಲಾಖೆಯ ನಿರ್ದೇಶಕ ಮುಖ್ತಾರ್ ಅಹ್ಮದ್, "ಶ್ರೀನಗರ ನಗರದಲ್ಲಿ ಇಂದು ಕನಿಷ್ಠ ತಾಪಮಾನವು ಮೈನಸ್ 2 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಡಿಸೆಂಬರ್ 8ರ ಸಂಜೆಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಣ ಹವೆ ಮುಂದುವರಿಯುವ ನಿರೀಕ್ಷೆಯಿದೆ" ಎಂದು ಹೇಳಿದರು.
ಎಲ್ಲೆಲ್ಲಿ ಎಷ್ಟು ಚಳಿ: ಗುಲ್ ಮಾರ್ಗ್ನಲ್ಲಿ ಮೈನಸ್ 3.5 ಮತ್ತು ಪಹಲ್ ಗಾಮ್ನಲ್ಲಿ ಮೈನಸ್ 4.8 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಜಮ್ಮು ನಗರದಲ್ಲಿ 8.4, ಕತ್ರಾ 10, ಬಟೋಟೆ 6.5, ಬನಿಹಾಲ್ 3.2 ಮತ್ತು ಭದೇರ್ವಾದಲ್ಲಿ 1.4 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
ಸ್ಥಳೀಯವಾಗಿ 'ಚಿಲ್ಲೈ ಕಲಾಂ' ಎಂದು ಕರೆಯಲ್ಪಡುವ 40 ದಿನಗಳ ತೀವ್ರ ಚಳಿಗಾಲದ ಅವಧಿಯು ಪ್ರತಿವರ್ಷ ಡಿಸೆಂಬರ್ 21 ರಂದು ಪ್ರಾರಂಭವಾಗುತ್ತದೆ ಮತ್ತು ಜನವರಿ 30 ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ, ಕನಿಷ್ಠ ತಾಪಮಾನವು ಘನೀಕರಣ ಬಿಂದುಕ್ಕಿಂತ ಹಲವಾರು ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ ಮತ್ತು ಹಗಲಿನ ತಾಪಮಾನ 6 ರಿಂದ 8 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.
ಜಲಮೂಲಗಳ ಮೇಲ್ಮೈ ಹೆಪ್ಪುಗಟ್ಟುವಿಕೆ; ಸೂರ್ಯನು ಹೆಚ್ಚಾಗಿ ಮೋಡಗಳ ಮರೆಯಲ್ಲಿ ಅಡಗಿರುವುದರಿಂದ, ಬೆಳಿಗ್ಗೆ ಮತ್ತು ಸಂಜೆ ತುಂಬಾ ತಂಪಾದ ವಾತಾವರಣವಿರುತ್ತದೆ. ಈ ಅವಧಿಯಲ್ಲಿ ನದಿ, ತೊರೆಗಳು, ಸರೋವರ, ಬಾವಿಗಳು ಮತ್ತು ಕೊಳಗಳು ಸೇರಿದಂತೆ ಹೆಚ್ಚಿನ ಜಲಮೂಲಗಳು ಮೇಲ್ಮೈಯಲ್ಲಿ ಹೆಪ್ಪುಗಟ್ಟುತ್ತವೆ. ಈ ಸಮಯದಲ್ಲಿ ಸರೋವರಗಳು ಮತ್ತು ನದಿಗಳಲ್ಲಿ ದೋಣಿ ವಿಹಾರ ಅಥವಾ ರೋಯಿಂಗ್ ಮಾಡುವುದು ಅತ್ಯಂತ ಕಷ್ಟಕರ.
ಚಳಿಗಾಲ ಆರಂಭವಾಗುತ್ತಿರುವಂತೆಯೇ ಜನ ಬೆಚ್ಚಗಿನ ಬಟ್ಟೆಗಳನ್ನು ಧರಿಸಲಾರಂಭಿಸಿದ್ದಾರೆ. ಚಳಿಗಾಲದಲ್ಲಿ ಕಾಶ್ಮೀರಿಗಳು ಶಿತದಿಂದ ಪಾರಾಗಲು ಫೆರಾನ್ ಎಂಬ ಉಡುಪು ಧರಿಸುತ್ತಾರೆ. ದೇಹವನ್ನು ಬೆಚ್ಚಗಿಡಲು ಕಾಶ್ಮೀರಿಗಳು ಫೆರಾನ್ ಕೆಳಗೆ ಕೆಂಡಗಳಿಂದ ತುಂಬಿದ ಮಣ್ಣಿನ ಬೆಂಕಿಯ ಮಡಕೆಯನ್ನು ಇಟ್ಟುಕೊಳ್ಳುವುದು ವಾಡಿಕೆ.
ತಾಜಾ ತರಕಾರಿ ಸಿಗುವುದು ಕಷ್ಟ ಕಷ್ಟ: ಚಿಲ್ಲೈ ಕಲಾಂ ಸಮಯದಲ್ಲಿ ತಾಜಾ ತರಕಾರಿಗಳು ಸಿಗುವುದು ಕಷ್ಟವಾದ್ದರಿಂದ ಸ್ಥಳೀಯರು ಬದನೆಕಾಯಿ, ಕುಂಬಳಕಾಯಿ ಮತ್ತು ಟೊಮೆಟೊ ಸೇರಿದಂತೆ ಒಣ ತರಕಾರಿಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಒಣಗಿದ ಮತ್ತು ಸುಟ್ಟ ಮೀನುಗಳನ್ನು ಸಹ ಕಾಶ್ಮೀರಿಗಳು ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚು ಬಳಸುತ್ತಾರೆ. ಇವು ದೇಹಕ್ಕೆ ಅಗತ್ಯವಿರುವ ಹೆಚ್ಚುವರಿ ಕ್ಯಾಲೊರಿಗಳನ್ನು ನೀಡುತ್ತವೆ.
ಇದನ್ನೂ ಓದಿ : ಅಮೃತ್ಸರದ ಗೋಲ್ಡನ್ ಟೆಂಪಲ್ನಲ್ಲಿ ಗುಂಡಿನ ಸದ್ದು; ಸುಖಬೀರ್ ಸಿಂಗ್ ಬಾದಲ್ ಕೂದಲೆಳೆ ಅಂತರದಲ್ಲಿ ಪಾರು