ಢಾಕಾ(ಬಾಂಗ್ಲಾದೇಶ): ದೇಶದ್ರೋಹ, ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಆರೋಪಗಳಡಿ ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ನಾಯಕ ಚಿನ್ಮಯಿ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ಮತ್ತೊಮ್ಮೆ ತಿರಸ್ಕೃತವಾಗಿದೆ. ಅಲ್ಲಿನ ನ್ಯಾಯಾಲಯವು 2025ರ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ.
ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬಾಂಗ್ಲಾದೇಶ ನ್ಯಾಯಾಲಯದಲ್ಲಿ ನಡೆಯಿತು. ಆದರೆ, ದಾಸ್ ಅವರ ಪರವಾಗಿ ಯಾವ ವಕೀಲರೂ ಹಾಜರಾಗಲಿಲ್ಲ. ಹೀಗಾಗಿ, ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.
ಬಾಂಗ್ಲಾದೇಶ ಸಮ್ಮಿಳಿತ ಸನಾತನಿ ಜಾಗರಣ್ ಜೋತೆಯ ವಕ್ತಾರರಾದ ಚಿನ್ಮಯಿ ಕೃಷ್ಣ ದಾಸ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ನವೆಂಬರ್ 25ರಂದು ಢಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನವೆಂಬರ್ 26ರಂದು ಚಟ್ಟೋಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು.
ದಾಳಿ ಭೀತಿ, ವಾದ ಮಂಡನೆಗೆ ವಕೀಲರ ನಕಾರ: ಕೃಷ್ಣ ದಾಸ್ ಅವರ ಸಹವರ್ತಿ ಸಾವತಂತ್ರ ಗೌರಾಂಗ ದಾಸ್ ಮಾತನಾಡಿ, "ಒತ್ತಡ, ಬೆದರಿಕೆಗೆ ಹೆದರಿ ಯಾವ ವಕೀಲರೂ ಹಿಂದೂ ನಾಯಕನ ಪರವಾಗಿ ವಾದ ಮಾಡಲು ಮುಂದೆ ಬರುತ್ತಿಲ್ಲ. ಈಗಾಗಲೇ ದಾಸ್ ಅವರ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಭಯ ವಕೀಲರಲ್ಲಿದೆ" ಎಂದು ಹೇಳಿದರು.
ಚಿನ್ಮಯಿ ಕೃಷ್ಣದಾಸ್ ಅವರ ಬಂಧನದ ವೇಳೆ ನಡೆದ ಘರ್ಷಣೆಯಲ್ಲಿ ವಕೀಲ ಇಸ್ಲಾಂ ಎಂಬವರು ಮೃತಪಟ್ಟಿದ್ದರು. ಇದರ ವಿರುದ್ಧ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಕೃಷ್ಣದಾಸ್ ಈ ಹಿಂದೆ ಬಾಂಗ್ಲಾದೇಶದ ಇಸ್ಕಾನ್‌ನ ವಕ್ತಾರರಾಗಿ ಕೆಲಸ ಮಾಡಿದ್ದರು.
ದಾಸ್ ಪರ ವಕೀಲನ ಮೇಲೆ ದಾಳಿ: ಚಿನ್ಮಯಿ ಕೃಷ್ಣ ದಾಸ್ ಅವರ ಪರ ವಾದ ಮಂಡಿಸಿದ್ದ ವಕೀಲ ರಾಮನ್ ರಾಯ್ ಅವರ ಮೇಲೆ ಉದ್ರಿಕ್ತರು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸದ್ಯ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪದತ್ಯಾಗ ಮಾಡಿದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಅಮಾನುಷ ದಾಳಿಗಳು ನಡೆಯುತ್ತಿವೆ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿವೆ. ಆ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ: ಮಧ್ಯ ಪ್ರದೇಶ: ರತಪಾನಿ ಅರಣ್ಯ ಪ್ರದೇಶ ದೇಶದ 57ನೇ ಹುಲಿ ಸಂರಕ್ಷಣಾ ವಲಯವಾಗಿ ಘೋಷಣೆ