ಆನೇಕಲ್(ಬೆಂಗಳೂರು): ತಾಲೂಕಿನ ಹಾರೋಹಳ್ಳಿಯ ಕೆರೆಯಲ್ಲಿ ಹುಸ್ಕೂರು ಬಳಿಯ ಹಾರೋಹಳ್ಳಿ ನಿವಾಸಿ ಸಹನಾ(20) ಅವರ ಶವ ದೊರೆತಿದೆ. ಯುವತಿಯ ಸಾವಿಗೆ ತಂದೆ ರಾಮಮೂರ್ತಿ ಕಾರಣ ಎಂದು ಮೃತಳ ಚಿಕ್ಕಪ್ಪನ ಮಗ ಗಿರೀಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ವಿವರ: "ಸಹನಾ ತೇಜಸ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಕುರಿತು ಮಾತುಕತೆಗೆ ಪಾಪಣ್ಣ ಎಂಬವರ ಮನೆಗೆ ನನ್ನ ದೊಡ್ಡಪ್ಪ ರಾಮಮೂರ್ತಿ, ದೊಡ್ಡಮ್ಮ ಹಾಗೂ ಸಹನಾಳ ತಂಗಿ ತೆರಳಿದ್ದರು. ಸ್ವಲ್ಪ ಸಮಯದ ನಂತರ ತೇಜಸ್ ಮತ್ತವರ ತಾಯಿ ಕೂಡ ಪಾಪಣ್ಣ ಮನೆಗೆ ಬಂದರು. ಅಲ್ಲಿ ತೇಜಸ್ನ ತಾಯಿ ಸಹನಾಳಿಗೆ ನಿಮ್ಮ ಮನೆಯವರು ಒಪ್ಪಿದ್ದಲ್ಲಿ ಎರಡು ವರ್ಷಗಳ ನಂತರ ಮದುವೆ ಮಾಡಿಸುವುದಾಗಿ ತಿಳಿಸಿದರು. ನಂತರ, ಪಾಪಣ್ಣ ಮತ್ತು ನಮ್ಮ ದೊಡ್ಡಪ್ಪ, ದೊಡ್ಡಮ್ಮ ಸಹನಾಳಿಗೆ ಬುದ್ಧಿವಾದ ಹೇಳಿದರು."
"ಬಳಿಕ ಸಹನಾಳನ್ನು ನನ್ನ ದೊಡ್ಡಪ್ಪ ಸ್ಕೂಟರ್ನಲ್ಲಿ ಹುಸ್ಕೂರಿನಿಂದ ಹಾರೋಹಳ್ಳಿಯ ತಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೊರಟರು. ನಾನು ನಮ್ಮ ದೊಡ್ಡಮ್ಮ ಕಲ್ಪನಾ ಮತ್ತು ಸಹನಾಳ ತಂಗಿ ಕಾರಿನಲ್ಲಿ ಹೊರಟು ಮನೆ ತಲುಪಿದೆವು. ಆದರೆ ದೊಡ್ಡಪ್ಪ ಮತ್ತು ಸಹನಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಿಕೊಂಡು ವಾಪಸ್ ಹುನ್ನೂರು ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಹಾರೋಹಳ್ಳಿ ಕೆರೆಯ ಬಳಿ ಜನರ ಗುಂಪು ಸೇರಿತ್ತು. ನಾನು ಕಾರು ನಿಲ್ಲಿಸಿ ಹತ್ತಿರ ಹೋಗಿ ನೋಡಿದೆ. ಕೆರೆ ನೀರಿನಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವುದು ಕಂಡುಬಂತು. ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಕೆರೆಯಿಂದ ಯುವತಿಯನ್ನು ದಡಕ್ಕೆ ತಂದು ನೋಡಿದಾಗ ಆಕೆ ಸಹನಾ ಎಂದು ಗೊತ್ತಾಯಿತು."
"ತಮ್ಮ ದೊಡ್ಡಪ್ಪ ರಾಮಮೂರ್ತಿ ಸ್ಥಳದಲ್ಲಿ ಕಾಣಲಿಲ್ಲ. ನಂತರ, ನಾನು ಸಹನಾ ಮೃತದೇಹವನ್ನು ಸ್ಥಳೀಯರ ನೆರವಿನಿಂದ ಮನೆಯ ಬಳಿಗೆ ತೆಗೆದುಕೊಂಡು ಬಂದಿದ್ದು, ಈ ವೇಳೆ ಮನೆಯ ಬಳಿ ಇದ್ದ ದೊಡ್ಡಪ್ಪನ ಘಟನೆ ಬಗ್ಗೆ ವಿಚಾರಿಸಿದೆ. ಸಹನಾಳನ್ನು ಸ್ಕೂಟರ್ನಲ್ಲಿ ಕರೆದುಕೊಂಡು ಬರುತ್ತಿದ್ದಾಗ, ಹಾರೋಹಳ್ಳಿ ಕರೆ ಏರಿ ಪಕ್ಕದಲ್ಲಿರುವ ಕೊಂಡ ಬೀರಮ್ಮ ದೇವಸ್ಥಾನದ ಬಳಿ ನಿಯಂತ್ರಣ ತಪ್ಪಿ ಸ್ಕೂಟರ್ ಮತ್ತು ಸಹನಾ ಕರೆಗೆ ಬಿದ್ದಿದ್ದು, ನಾನು ರಸ್ತೆ ಮೇಲೆ ಬಿದ್ದೆ. ನಂತರ ಗ್ರಾಮಸ್ಥರನ್ನು ಕರೆದುಕೊಂಡು ಬರಲು ಊರಿಗೆ ಬಂದಿದ್ದಾಗಿ ತಿಳಿಸಿದರು. ನನ್ನ ದೊಡ್ಡಪ್ಪ ರಾಮಮೂರ್ತಿ ಸಹನಾಳನ್ನು ಹುಸ್ಕೂರಿನಿಂದ ಹಾರೋಹಳ್ಳಿ ಕರೆದುಕೊಂಡು ಬರುವಾಗ ಕೆರೆಗೆ ಬೀಳಿಸಿದ್ದರಿಂದ ಸಹನಾ ಮೃತಪಟ್ಟಿದ್ದಾಳೆ. ಈ ಸಂಬಂಧ ನನ್ನ ದೊಡ್ಡಪ್ಪ ರಾಮಮೂರ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು" ಎಂದು ಮೃತಳ ಚಿಕ್ಕಪ್ಪನ ಮಗ ಗಿರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟಣಾ ಸ್ಥಳಕ್ಕೆ ಎಎಸ್ಪಿ, ಡಿವೈಎಸ್ಪಿ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮಮೂರ್ತಿಯ ನಿರ್ಲಕ್ಷ್ಯದ ಚಾಲನೆಯೇ ಸಹನಾ ಸಾವಿಗೆ ಕಾರಣ ಎಂದು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹಾವು ಕಚ್ಚಿ ಮಹಿಳೆ, ಹೆಜ್ಜೇನು ದಾಳಿಯಿಂದ ವ್ಯಕ್ತಿ ಮೃತ: ಹಾವೇರಿಯಲ್ಲಿ ಇಬ್ಬರು ರೈತರ ದುರ್ಮರಣ