ಬೆಂಗಳೂರು: ವಿವಾದ ಹಾಗೂ ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿದ್ದ ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನದ ವಸ್ತ್ರ ಸಂಹಿತೆಗೆ ಇಂದು ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವ ಯಾವುದೇ ವ್ಯಕ್ತಿಯನ್ನು ದೇವಾಲಯದ ಆವರಣ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಸ್ತ್ರ ಸಂಹಿತೆಗೆ ಸಂಬಂಧಿಸಿದ ದೇವಸ್ಥಾನದ ಬೈಲಾದಲ್ಲಿರುವ ವಿವಾದಾತ್ಮಕ ಅಂಶಗಳನ್ನು ಆಕ್ಷೇಪಿಸಿ ಮಡಿಕೇರಿ ನಿವಾಸಿ ಸಿ.ಎ.ಸಂಜು ಹಾಗೂ ವಿರಾಜಪೇಟೆ ನಿವಾಸಿ ಅಮಿತ್ ಪಿ.ಭೀಮಯ್ಯ ಎಂಬವರು ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ ಅರ್ಜಿ ಸಂಬಂಧ ಕೊಡಗು ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ, ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.
ಅರ್ಜಿ ವಿವರ: ದೇವಸ್ಥಾನದ ಹಾಲಿ ಆಡಳಿತ ಮಂಡಳಿಗೆ ಜಿಲ್ಲಾ ಉಪ ನೋಂದಣಾಧಿಕಾರಿಗಳು 2024ರ ಅ.10ರಂದು ನೀಡಿರುವ ನೋಂದಣಿ ಪ್ರಮಾಣ ಪತ್ರ ರದ್ದುಪಡಿಸಬೇಕು. ಆಡಳಿತ ಮಂಡಳಿ ರೂಪಿಸಿರುವ ಬೈಲಾದಲ್ಲಿ ವಸಸಂಹಿತೆಗೆ ಸಂಬಂಧಿಸಿದ ಸೆಕ್ಷನ್ 4(7) ಜಾರಿಗೆ ತಡೆ ನೀಡಬೇಕು. ಸಾಂಪ್ರದಾಯಿಕ ಉಡುಪು ಧರಿಸಿ ಬರುವ ಕೊಡವ ಹಾಗೂ ಕೊಡವ ಭಾಷಿಕ ಜನರಿಗೆ ಮಹಾಮೃತ್ಯುಂಜಯ ದೇವಸ್ಥಾನ ಪ್ರವೇಶಿಸಲು ಮತ್ತು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅಡ್ಡಿಪಡಿಸದಂತೆ ದೇವಸ್ಥಾನ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ: ಜಿಎನ್ಎಂ ನರ್ಸಿಂಗ್ ಪರೀಕ್ಷೆ ನಡೆಸುವ ಅಧಿಕಾರ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಬದಲಿಸಲು ಅರ್ಜಿ