Turmeric Coffee Recipe: ಕಾಫಿ. ಬಹುತೇಕರ ಇಷ್ಟದ ಪೇಯ. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮಿಸ್ ಮಾಡದೇ ಕಾಫಿ ಕುಡಿಯುತ್ತಾರೆ. ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಆಗಾಗ್ಗೆ ಕಾಫಿ ಸವಿಯುವುದುಂಟು.
ಈ ಕಾಫಿಯಲ್ಲಿ ಹಲವು ಬಗೆಯ ಫ್ಲೇವರ್‌ಗಳಿವೆ. ಇದೀಗ ಹೊಸ ಬಗೆಯ ಕಾಫಿ ಟ್ರೆಂಡಿಂಗ್ ಆಗುತ್ತಿದೆ. ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಈ ಕಾಫಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದುವೇ ಅರಿಶಿನದ ಕಾಫಿ. ಇದನ್ನು 'ಗೋಲ್ಡನ್ ಮಿಲ್ಕ್ ಲ್ಯಾಟೆ' ಎಂದೂ ಕರೆಯಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಿಶಿನದ ಕಾಫಿಯ ಪ್ರಯೋಜನಗಳೇನು? ಆರೋಗ್ಯ ತಜ್ಞರು ಏನೆನ್ನುತ್ತಾರೆ? ಈ ಕಾಫಿ ತಯಾರಿಸುವುದು ಹೇಗೆ? ಎಂಬುದನ್ನು ತಿಳಿಯೋಣ.
ಅರಿಶಿನ ಕಾಫಿಯ ಲಾಭಗಳೇನು?:
- ಅರಿಶಿನದಲ್ಲಿ ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಪ್ರತಿರಕ್ಷಣಾ ವರ್ಧಕ ಗುಣಗಳು ಸಮೃದ್ಧವಾಗಿವೆ. ಇದನ್ನು ಕಾಫಿಯೊಂದಿಗೆ ಬೆರೆಸಿದಾಗ ರುಚಿ ಹೆಚ್ಚಿಸುವುದಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
- ಈ ಕಾರಣದಿಂದ ಅರಿಶಿನ ಕಾಫಿಯ ಜನಪ್ರಿಯತೆಯು ವಿಶ್ವಾದ್ಯಂತ ಹೆಚ್ಚುತ್ತಿದೆ. ಈ ಕಾಫಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ.
- ಸಂಧಿವಾತ ಮತ್ತು ಸ್ನಾಯು ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ. ಕಾಫಿ ಮತ್ತು ಅರಿಶಿನ ಎರಡರಲ್ಲೂ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವೆರಡು ಜೀವಕೋಶಗಳನ್ನು ಸರಿಪಡಿಸುತ್ತದೆ ಹಾಗೂ ಅಕಾಲಿಕ ವಯಸ್ಸನ್ನು ತಡೆಯುತ್ತಾರೆ.
- ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಸ್ ಮತ್ತು ಆ್ಯಂಟಿ ಫಂಗಲ್ ಗುಣಲಕ್ಷಣಗಳು ಚಳಿಗಾಲದಲ್ಲಿ ಶೀತಗಳು ಮತ್ತು ಇತರ ಸೋಂಕುಗಳನ್ನು ತಡೆಯುತ್ತದೆ.
- ಸಾಮಾನ್ಯವಾಗಿ ಕಾಫಿಯ ಆಮ್ಲೀಯ ಗುಣಗಳು ಅನಿಲವನ್ನು ಉಂಟುಮಾಡುತ್ತವೆ. ಆದರೆ, ಅರಿಶಿನದಿಂದ ತಯಾರಿಸಿದ ಕಾಫಿ ಹೊಟ್ಟೆನೋವು ಮತ್ತು ಅಜೀರ್ಣವನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕಾಪಾಡುತ್ತದೆ.
- ಮೆದುಳು ಮತ್ತು ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.
ಅರಿಶಿನ ಕಾಫಿ ತಯಾರಿಸುವುದು ಹೇಗೆ?:
- ನಿಮ್ಮ ಆಯ್ಕೆಯ ಕಾಫಿಯನ್ನು ಮೊದಲು ಸಿದ್ಧಪಡಿಸಿಕೊಳ್ಳಿ. ಅದು ಬಿಸಿ ಬಿಸಿಯಾಗಿರುವಾಗ, ಅರ್ಧ ಚಮಚ ಅರಿಶಿನ, ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಕಾಲು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅಷ್ಟೇ, ಅದ್ಭುತವಾದ ಟೇಸ್ಟಿ ಮತ್ತು ಆರೋಗ್ಯಕರ ಅರಿಶಿನ ಕಾಫಿ ಸಿದ್ಧ.
- ಈ ಕಾಫಿ ಕುಡಿಯುವವರಿಗೆ ಹೊಸ ಪರಿಮಳದ ಪರಿಚಯವಾಗುತ್ತದೆ ಹಾಗೂ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಮ್ಮೆ ಟ್ರೈ ಮಾಡಿ.