ನೈನಿತಾಲ್(ಉತ್ತರಾಖಂಡ): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ತರಾಖಂಡ್ನ ನೈನಿತಾಲ್‌ನಲ್ಲಿರುವ ಪ್ರಸಿದ್ಧ ನೈನಾದೇವಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಗುಲದಲ್ಲಿ ಪರಿಕ್ರಮ ನಡೆಸಿ, ಆವರಣದಲ್ಲಿ ಮಂತ್ರ ಪಠಿಸಿದರು. ಬಳಿಕ ಮಾತನಾಡಿದ ಅವರು, "ನೈನಿ ಕೆರೆ ಮತ್ತು ನೈನಿತಾಲ್ ನನಗೆ ಕಾಶ್ಮೀರವನ್ನು ನೆನಪಿಸುತ್ತಿದೆ. ಕಾಶ್ಮೀರದ ಕೆರೆಗಳಲ್ಲಿನ ಸೌಂದರ್ಯ ನೈನಿತಾಲ್ನಲ್ಲೂ ಇದೆ. ಎರಡೂ ಒಂದೇ ರೀತಿಯಾಗಿ ನೋಡಲು ಬಹಳ ಸುಂದರವಾಗಿವೆ" ಎಂದರು.
ಇದಕ್ಕೂ ಮುನ್ನ, ನೈನಾದೇವಿ ದೇಗುಲ ಟ್ರಸ್ಟ್‌ನ ಅಧ್ಯಕ್ಷ ರಾಜೀವ್ ಲೊಚನ್ ಶಾ, ಉಪ ಕಾರ್ಯದರ್ಶಿ ಪ್ರದೀಪ್ ಶಾ ಮತ್ತು ಇತರರರು ಮಾಜಿ ಪ್ರಧಾನಿಯನ್ನು ಬರಮಾಡಿಕೊಂಡರು. ಮಾತೆ ನೈನಾದೇವಿಯ ಪ್ರತಿಮೆ ಮತ್ತು ಚುನಾರಿಯನ್ನು ಕೊಡುಗೆಯಾಗಿ ನೀಡಿದರು. ದೇವೇಗೌಡ ಪರವಾಗಿ ದೇಗುಲದ ಮುಖ್ಯ ಆಚಾರ್ಯ ಚಂದ್ರಶೇಖರ್ ತಿವಾರಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉತ್ತರಾಖಂಡ್ ರಾಜ್ಯ ನಿರ್ಮಾಣ ಕಾರ್ಯವನ್ನು ನೆನೆದ ದೇವೇಗೌಡ, "ನಮ್ಮ ಸರ್ಕಾರ ಕೆಲವೇ ತಿಂಗಳ ಕಾಲ ಅಸ್ತಿತ್ವದಲ್ಲಿದ್ದ ಕಾರಣ ಉತ್ತರಾಖಂಡಕ್ಕೆ ರಾಜ್ಯ ಸ್ಥಾನಮಾನ ನೀಡುವ ನಮ್ಮ ಕನಸು ಹಾಗೆಯೇ ಉಳಿಯಿತು. ಇದಾದ ಕೆಲವು ವರ್ಷಗಳ ಬಳಿಕ ಉತ್ತರ ಪ್ರದೇಶವನ್ನು ವಿಭಜಿಸಿ, ಉತ್ತರಾಖಂಡ ರಾಜ್ಯವನ್ನು ನಿರ್ಮಿಸಲಾಯಿತು" ಎಂದರು.
ಇದನ್ನೂ ಓದಿ: ಮಹಾಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು