ಕಾರವಾರ: ರಾಜ್ಯಾದ್ಯಂತ ಪ್ರಸಕ್ತ ವರ್ಷ ಸುರಿದ ಧಾರಾಕಾರ ಮಳೆಗೆ ರೈತರು ತತ್ತರಿಸಿದ್ದಾರೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಸಾಲ ಪಡೆದು ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಇದೀಗ ರೈತರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುವಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೊಡುತ್ತಿರುವ ಬೆಳೆಹಾನಿ ಪರಿಹಾರದ ಮೊತ್ತ ಕವಡೆ ಕಾಸಿನಷ್ಟಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಶಕದಲ್ಲಿ ಆಗದ ಮಳೆಯ ಅವಾಂತರ 2024ರಲ್ಲಿ ಆಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಗುಡ್ಡ ಕುಸಿತದಿಂದ ಅಪಾರ ಪ್ರಾಣಹಾನಿ ಆಗಿರುವುದು ಒಂದೆಡೆಯಾದರೆ ಇನ್ನೊಂದು ಕಡೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೀರು ಪಾಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಸುಮಾರು 981 ಹೆಕ್ಟೇರ್ನಷ್ಟು ಬೆಳೆಹಾನಿ ಆಗಿರುವ ವರದಿ ಆಗಿತ್ತು. ಈ ಪೈಕಿ ಇದುವರೆಗೆ 752 ಹೆಕ್ಟೇರ್ ಭೂಮಿಗಷ್ಟೇ ಪರಿಹಾರ ಬಿಡುಗಡೆ ಆಗಿದ್ದು, ಇನ್ನುಳಿದ ಭೂಮಿಗೆ ಪರಿಹಾರ ಕೊಡಲು ತಾಂತ್ರಿಕ ಸಮಸ್ಯೆ ಅಡ್ಡಿ ಆಗಿದೆ. ಇನ್ನು, ಹಿಂಗಾರು ಹಂಗಾಮಿನಲ್ಲಿ ಸುಮಾರು 504 ಹೆಕ್ಟೇರ್ ಭೂಮಿಯಲ್ಲಿ ಬೆಳೆಹಾನಿ ಆಗಿರುವುದು ವರದಿ ಆಗಿದೆ. ಆದರೆ ಈವರೆಗೆ ಹಿಂಗಾರು ಬೆಳೆಹಾನಿ ಪರಿಹಾರ ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ. 504 ಹೆಕ್ಟೇರ್ ಪೈಕಿ ಕೇವಲ 420 ಹೆಕ್ಟೇರ್ ಭೂಮಿಗಷ್ಟೇ ಪರಿಹಾರ ಸಿಗುವ ಸಾಧ್ಯತೆ ಇದ್ದು, ಮುಂಗಾರಿನಂತೆ ಹಿಂಗಾರು ಬೆಳೆಹಾನಿ ಪರಿಹಾರದಲ್ಲೂ ಕೆಲವರು ವಂಚಿತರಾಗುವ ಸಾಧ್ಯತೆ ಇದೆ ಅನ್ನೋದು ರೈತರ ಮಾತಾಗಿದೆ.
ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, "ಈಗಾಗಲೇ ಸರ್ವೇ ಕಾರ್ಯ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಪರಿಹಾರ ವಿತರಣೆ ಆಗಲಿದೆ. ಈ ಹಿಂದೆ ಕೆಲವರಿಗೆ ತಾಂತ್ರಿಕ ತೊಂದರೆಯಿಂದ ಪರಿಹಾರ ವಿತರಣೆ ಆಗಿರಲಿಲ್ಲ. ಆದರೆ ಅವುಗಳನ್ನು ಸರಿಪಡಿಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಉತ್ತರ ಕನ್ನಡ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಶಿವಪ್ರಸಾದ್ ಮಾಹಿತಿ ನೀಡಿದರು.
ರೈತ ನಾಗೇಂದ್ರ ಮಾತನಾಡಿ, "ಸರ್ಕಾರ ಹಿಂಗಾರು ಹಾಗೂ ಮುಂಗಾರು ಎರಡು ಬಾರಿ ಪರಿಹಾರ ಕೊಟ್ಟಿರುವುದು ಪ್ರತಿ ಹೆಕ್ಟೇರ್ಗೆ 6,800 ರೂಪಾಯಿ ಮಾತ್ರ. ಪರಿಹಾರದ ಮೊತ್ತ ಬಹಳಷ್ಟು ಕಡಿಮೆ ಇದ್ದಿದ್ದಕ್ಕೆ ಜಿಲ್ಲೆಯ ರೈತರು ಆಕ್ರೋಶಿತರಾಗಿದ್ದಾರೆ. ಒಂದು ಎಕರೆ ಮೆಕ್ಕೆಜೋಳ ಬಿತ್ತನೆ ಮಾಡುವ ಮುನ್ನ ನೆಲ ಹದ ಮಾಡಿ ರಸಗೊಬ್ಬರ ಸೇರಿದಂತೆ ಬೀಜ ಬಿತ್ತನೆ ಮಾಡುವುದಕ್ಕೆ ಪ್ರತಿ ಹೆಕ್ಟೇರ್ಗೆ ಕನಿಷ್ಠ 10 ಸಾವಿರ ರೂಪಾಯಿ ವೆಚ್ಚ ಆಗುತ್ತದೆ. ಆದರೆ ಸರ್ಕಾರ ಕೊಡುತ್ತಿರುವ ಹಣ ವೆಚ್ಚ ಮಾಡಿದ ಅರ್ಧದಷ್ಟು ಆಗಿರುವುದರಿಂದ, ಇನ್ನುಳಿದ ವೆಚ್ಚದ ಹಣವನ್ನು ಎಲ್ಲಿಂದ ಭರಿಸಿ, ನಿತ್ಯದ ಜೀವನ ಹೇಗೆ ಮಾಡುವುದು ಎಂಬುದು ರೈತರ ಮುಂದಿನ ದೊಡ್ಡ ಪ್ರಶ್ನೆ ಆಗಿದೆ. ಯಾಕೆಂದರೆ ಎರಡು ಬಾರಿ ಬಿತ್ತನೆ ಮಾಡಿ ಹಾನಿ ಅನುಭವಿಸಿರುವ ರೈತರು ಸಂಪೂರ್ಣವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈ ಬಾರಿ ಸುರಿದ ಅಬ್ಬರದ ಮಳೆ, ಜಿಲ್ಲೆಯ ರೈತರನ್ನು ಆತಂಕಕ್ಕೆ ದೂಡಿದ್ದು, ಸರ್ಕಾರ ಕೊಡುತ್ತಿರುವ ಬೆಳೆ ಹಾನಿ ಪರಿಹಾರದಿಂದ ಮಾಡಿದ ಸಾಲವು ತೀರಿಸಲಾಗದಂತಾಗಿದೆ. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ನಿಯಮದ ಪ್ರಕಾರ ಹೆಚ್ಚಿನ ಪರಿಹಾರ ನಿಡಬೇಕು ಹಾಗೂ ಹಿಂಗಾರು ಬೆಳೆ ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ.
ಇದನ್ನೂ ಓದಿ: ಹಿಂಗಾರಿನಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ, ಒಂದು ವಾರದಲ್ಲಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ