ಬೆಳಗಾವಿ: ಶ್ರಮ ವಹಿಸಿ ದುಡಿಯುವ ಮನಸ್ಸುಗಳಿಗೆ, ದುಡಿದೇ ತಿನ್ನಬೇಕು ಎನ್ನುವವರಿಗೆ ವಯಸ್ಸಿನ ಮಿತಿ ಇಲ್ಲ. ಕೆಲಸ ಮಾಡದೇ ಸುಮ್ಮನೆ ಓಡಾಡುತ್ತಿರುವ ಅದೆಷ್ಟೋ ಜನರ ನಡುವೆ, ನಮಗೆ ವಯಸ್ಸಾಯಿತು ಅಂತಾ ಈ ಹಿರಿಯ ಜೀವಗಳು ಮನೆಯಲ್ಲಿ ಕುಳಿತಿಲ್ಲ. ಕಷ್ಟಪಟ್ಟು ಕೆಲಸ ಮಾಡುವ ಇವರಿಗೆ ನರೇಗಾ ಯೋಜನೆ ಕೈ ಹಿಡಿದಿದೆ. ಇವರ ಕಾಯಕ ಇತರರಿಗೂ ಮಾದರಿಯಾಗಿದೆ. ಇದು ಕಾಯಕಯೋಗಿ ದಂಪತಿಗಳ ಕುರಿತ ವಿಶೇಷ ವರದಿ.
ಕೈಯಲ್ಲಿ ಗುದ್ದಲಿ ಹಿಡಿದು ಅಜ್ಜ ಭೂಮಿ ಅಗೆಯುತ್ತಿದ್ದರೆ, ಸಲಿಕೆ, ಬುಟ್ಟಿಯಲ್ಲಿ ಮಣ್ಣು ತುಂಬಿ ಅಜ್ಜಿ ವಡ್ಡಿಗೆ ಹಾಕುತ್ತಿದ್ದರು. ಕಿರಿಯ ವಯಸ್ಸಿನವರ ಜೊತೆಗೆ ಪೈಪೋಟಿ ಎನ್ನುವಂತೆ ಕೆಲಸದ ಮೇಲೆ ಅವರಿಗಿರುವ ಅದಮ್ಯ ಉತ್ಸಾಹ ಎಂಥವರನ್ನೂ ಬೆರಗುಗೊಳಿಸುತ್ತಿತ್ತು. ಈ ದೃಶ್ಯ ಕಂಡು ಬಂದಿದ್ದು ಖಾನಾಪುರ ತಾಲೂಕಿನ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದಲ್ಲಿ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದಲ್ಲಿ ಟ್ರೆಂಚ್ ಕಮ್ ಬದು ನಿರ್ಮಾಣ ಕೆಲಸ ನಡೆಯುತ್ತಿದೆ. ಈ ವೇಳೆ, ಶೇಡೆಗಾಳಿ ಗ್ರಾಮದ 80 ವರ್ಷದ ನಾಗಪ್ಪ ಕುಂಬ್ರದವಾಡ್ಕರ್ ಮತ್ತು 75 ವರ್ಷದ ಆನಂದಾ ದಂಪತಿ ಕೆಲಸ ಮಾಡುತ್ತಿರುವುದು ಗಮನ ಸೆಳೆದಿದೆ.
ಈ ವೃದ್ಧ ದಂಪತಿಗೆ ಅಲ್ಪಪ್ರಮಾಣದ ಜಮೀನಿದ್ದು, ಮಕ್ಕಳೂ ಇದ್ದಾರೆ. ಆದ್ರೆ ಯಾರಿಗೂ ಹೊರೆಯಾಗದೇ ಈ ಅಜ್ಜ-ಅಜ್ಜಿ ಸ್ವತಂತ್ರ ಜೀವನ ನಡೆಸುತ್ತಿರುವುದು ವಿಶೇಷವಾಗಿದ್ದು, ಇವರ ಸ್ವಾವಲಂಬಿ ಬದುಕು ನಮಗೆಲ್ಲಾ ಪ್ರೇರಣೆ ಎನ್ನುತ್ತಾರೆ ಗ್ರಾಮಸ್ಥರು.
ದುಡಿದು ತಿನ್ನುವುದರಲ್ಲಿ ಖುಷಿ ಇದೆ : 'ಈಟಿವಿ ಭಾರತ' ಈ ದಂಪತಿಗಳನ್ನು ಮಾತನಾಡಿಸಿದಾಗ, ''ಕುಳಿತು ತಿನ್ನುವುದು ಏಕೆ. ಮೈಯಲ್ಲಿ ಶಕ್ತಿ ಇರೋವರೆಗೂ ದುಡಿಯುವುದೇ. ಅಲ್ಲದೇ ಕೆಲಸಕ್ಕಾಗಿ ಅಲ್ಲಿ, ಇಲ್ಲಿ ಅಲೆದಾಡುವ ಬದಲು ಈ ನರೇಗಾ ಯೋಜನೆಯ ಕೆಲಸ ಮಾಡಲು ಬಂದಿದ್ದೇವೆ. ಇನ್ನೊಬ್ಬರ ಮೇಲೆ ಅವಲಂಬಿತವಾಗದೆ, ಹೀಗೆ ದುಡಿದು ತಿನ್ನುವುದರಲ್ಲಿ ಖುಷಿ ಇದೆ. ಹಾಗಾಗಿ, ಇಲ್ಲಿ ಕೆಲಸ ಮಾಡುತ್ತಿದ್ದೇವೆ. ನರೇಗಾ ನಮಗೆ ಅನುಕೂಲ ಆಗಿದೆ'' ಎಂದರು.
ಅಲ್ಲಿಯೇ ಕೆಲಸ ಮಾಡುತ್ತಿದ್ದ ರೇಖಾ ಗುರವ ಅವರು ಮಾತನಾಡಿ, ''ಇಳಿ ವಯಸ್ಸಿನ ಅಜ್ಜ-ಅಜ್ಜಿ ಕೆಲಸ ಪ್ರೇರಣೆ ಆಗಿ, ನಾವು ಮನೆಯಲ್ಲಿ ಖಾಲಿ ಕುಳಿತುಕೊಳ್ಳಬಾರದು ಅಂತಾ ನರೇಗಾ ಕೆಲಸಕ್ಕೆ ಬಂದಿದ್ದೇವೆ. ನರೇಗಾ ಕೂಲಿ ಹಣದಿಂದ ಮಕ್ಕಳ ಶಾಲೆ ಖರ್ಚು, ಮನೆ ನಿರ್ವಹಣೆಗೆ ಬಳಸುತ್ತಿದ್ದೇವೆ. ಅಲ್ಲದೇ ಇದ್ದ ಊರಲ್ಲೇ ಕೆಲಸ ಸಿಗುತ್ತಿದೆ. ನರೇಗಾ ನಮ್ಮ ಕೈ ಹಿಡಿದಿದೆ'' ಎಂದು ತಿಳಿಸಿದರು.
''ನಮ್ಮ ಅತ್ತೆ ಮತ್ತು ನಾನು ಕೆಲಸಕ್ಕೆ ಬಂದಿದ್ದೇವೆ. ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಕೆಲಸ ಮಾಡುತ್ತೇವೆ. ಊರಲ್ಲಿ ಯಾವುದೇ ಕೆಲಸ ಸಿಗದೇ ಇದ್ದಾಗ, ನರೇಗಾ ಕೆಲಸದಿಂದ ನಮಗೆ ತುಂಬಾ ಉಪಯೋಗ ಆಗುತ್ತಿದೆ. ಇನ್ನು ವಯಸ್ಸಾದ ಅಜ್ಜ-ಅಜ್ಜಿ ಕೂಡ ಇಲ್ಲಿ ಕೆಲಸ ಮಾಡುತ್ತಿರುವುದು ನೋಡಿ ನಮಗೆ ಮತ್ತಷ್ಟು ಹುಮ್ಮಸ್ಸು ಬಂದಿದೆ'' ಎನ್ನುತ್ತಾರೆ ಪೂಜಾ ನಾಳಕರ್.
ಇದನ್ನೂ ಓದಿ: ಕೂಡಿ ಬಾಳಿಸುತಿದೆ ಕೃಷಿ.. ಒಂದೇ ಮನೆ ಮೂರು ಧರ್ಮ-ಮೂರು ಪಕ್ಷದ ಸ್ನೇಹಿತರು.. ಬಹುತ್ವ ಭಾರತಕ್ಕೊಂದು ಮಾದರಿ..
ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಜಕುಮಾರ ಟಾಕಳೆ ಮಾತನಾಡಿ, ''ಕಳೆದ ಐದು ದಿನಗಳಿಂದ ನರೇಗಾ ಯೋಜನೆಯಡಿ ಈ ಅಜ್ಜ-ಅಜ್ಜಿ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಮೇಲಿನ ಅವರ ಆಸಕ್ತಿ ಮತ್ತು ಶ್ರದ್ಧೆ ನೋಡಿ ನನಗೂ ಅಚ್ಚರಿಯಾಯಿತು. ಇಂದಿನ ಯುವಕರು ಈ ಹಿರಿಯ ಜೀವಿಗಳ ಕೆಲಸದಿಂದ ಸ್ಫೂರ್ತಿ ಪಡೆದು, ಎಲ್ಲರೂ ಶ್ರಮವಹಿಸಿ ದುಡಿಯುವುದನ್ನು ರೂಢಿಸಿಕೊಳ್ಳಬೇಕು. ಖಾನಾಪುರ ತಾಲೂಕಿನ ಜನರು ನರೇಗಾ ಯೋಜನೆಯನ್ನು ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ'' ಎಂದರು.
''18 ವರ್ಷದಿಂದ ಮೇಲ್ಪಟ್ಟ ಎಲ್ಲರೂ ನರೇಗಾ ಕೆಲಸ ಮಾಡಬಹುದಾಗಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಇನ್ನು ವಿಶೇಷಚೇತನರು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅರ್ಧ ಕೆಲಸ ಮಾಡಿದರೆ ಪೂರ್ತಿ ವೇತನ ನೀಡಲಾಗುತ್ತದೆ. ಶೇಡೆಗಾಳಿಯಲ್ಲಿ ಅಜ್ಜ-ಅಜ್ಜಿ ಕೆಲಸ ಮಾಡುತ್ತಿರುವ ಸುದ್ದಿ ಕೇಳಿ ನಿಜಕ್ಕೂ ಖುಷಿ ಆಯಿತು. ಇವರು ಇಂದಿನ ಯುವ ಜನಾಂಗಕ್ಕೆ ಪ್ರೇರಣೆ. ಅವರನ್ನು ಶೀಘ್ರವೇ ಭೇಟಿಯಾಗುವೆ''. - ರಾಹುಲ್ ಶಿಂಧೆ, ಜಿಪಂ ಸಿಇಒ, ಬೆಳಗಾವಿ.
ಒಟ್ಟಾರೆ, ಬಾಳಿನ ಮುಸ್ಸಂಜೆಯಲ್ಲಿರುವ ಈ ವೃದ್ಧ ದಂಪತಿ ಯಾರ ಮೇಲೂ ಅವಲಂಬಿತರಾಗದೇ ದುಡಿದು ತಿನ್ನುತ್ತಿದ್ದು, ಇವರ ಕಾಯಕ ನಿಷ್ಠೆಯು ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಲಿ ಎನ್ನುವುದೇ ನಮ್ಮ ಆಶಯ.
ಇದನ್ನೂ ಓದಿ: ಖಾನಾಪುರದಲ್ಲಿದೆ ರಾಜ್ಯದಲ್ಲೇ ಮಾದರಿ ತೋಟಗಾರಿಕಾ ಕ್ಷೇತ್ರ: ವಿದೇಶಿ ಹಣ್ಣು, ಪಾಲಿಹೌಸ್ನಲ್ಲಿ ಅಂಜೂರ, ಮೆಣಸು ಪ್ರಯೋಗ