ಕೊಲ್ಹಾಪುರ (ಮಹಾರಾಷ್ಟ್ರ) : ತನ್ನ ಮನೆಯಲ್ಲೇ ಬೆಳೆದು, ತನ್ನ ಒಪ್ಪಿಗೆ ಇಲ್ಲದೆ ಪ್ರೀತಿಸಿದವನ ಜೊತೆ ಓಡಿಹೋಗಿ ಮದುವೆಯಾದ ಸೋದರ ಸೊಸೆಯ ಮೇಲೆ ಮಾವನೊಬ್ಬ ಹಗೆ ಸಾಧಿಸಿದ್ದಾನೆ. ಸೊಸೆ ಮತ್ತು ಆಕೆ ಪತಿಯ ಕುಟುಂಬಸ್ಥರನ್ನು ನಾಶ ಮಾಡಲು ಆಹಾರದಲ್ಲಿ ವಿಷ ಬೆರೆಸಿದ್ದಾನೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಉತ್ರೆ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ನೂತನವಾಗಿ ವಿವಾಹವಾದ ದಂಪತಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದಾಗ, ಅಲ್ಲಿಗೆ ನುಗ್ಗಿದ ಸೋದರಮಾವ ಅತಿಥಿಗಳಿಗೆ ಉಣಬಡಿಸಲು ಸಿದ್ಧ ಮಾಡಿದ್ದ ಆಹಾರದಲ್ಲಿ ಬಲವಂತವಾಗಿ ವಿಷ ಹಾಕಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಹೋದರಿಯ ಮಗಳು ತನ್ನ ಒಪ್ಪಿಗೆ ಇಲ್ಲದೆ, ಗ್ರಾಮದ ಯುವಕನ ಜೊತೆಗೆ ಓಡಿಹೋಗಿ ವಿವಾಹವಾಗಿದ್ದಕ್ಕೆ ಆರೋಪಿ ಮಹೇಶ್ ಪಾಟೀಲ್ ತೀವ್ರ ಕೋಪಗೊಂಡಿದ್ದಾನೆ. ತನ್ನ ಸೋದರ ಸೊಸೆಗೆ ಬುದ್ಧಿ ಕಲಿಸಲು ಆತ ಹೊಂಚು ಹಾಕಿದ್ದ. ಅದರಂತೆ ನೂತನ ದಂಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ನುಗ್ಗಿದ್ದಾನೆ ಎಂದು ತಿಳಿಸಿದ್ದಾರೆ.
ಓದಿ; ಬಾಗಲಕೋಟೆ : 2 ಮದ್ವೆ ಆಗಿರೋ ಮಹಿಳೆಯೊಂದಿಗೆ ವಿವಾಹ ಮಾಡಿಸಿ ₹4 ಲಕ್ಷ ವಂಚನೆ, 7 ಮಂದಿ ವಿರುದ್ಧ ಕೇಸ್
ನೂತನ ವಧು- ವರರಿಗೆ ಆಶೀರ್ವದಿಸಲು ಬಂದ ಅತಿಥಿಗಳಿಗೆ ಉಣ ಬಡಿಸಲು ತಯಾರಿಸಿದ್ದ ಆಹಾರಕ್ಕೆ ವಿಷಪ್ರಾಶನ ಮಾಡಿದ್ದಾನೆ. ಇದನ್ನು ಅಲ್ಲಿದ್ದವರು ಕಂಡು ತಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆತ ಯಾರ ಕೈಗೂ ಸಿಗದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಪ್ಪಿದ ಘೋರ ದುರಂತ : ಆರೋಪಿ ಊಟಕ್ಕೆ ವಿಷಪ್ರಾಶನ ಮಾಡುತ್ತಿರುವುದನ್ನು ಅಲ್ಲಿದ್ದವರು ನೋಡಿದ್ದರಿಂದ ಆಹಾರವನ್ನು ಅತಿಥಿಗಳಿಗೆ ಬಡಿಸಿಲ್ಲ. ಇದರಿಂದ ಘೋರ ದುರಂತವೊಂದು ತಪ್ಪಿದೆ. ಬಂಧುಗಳು ಯಾರೂ ಆಹಾರ ಸೇವಿಸಿಲ್ಲ. ಅದರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಸೋದರ ಮಾವ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನರ ಪ್ರಾಣಕ್ಕೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಆರೋಪಿ ಮಹೇಶ್ ಪಾಟೀಲ್ ವಿರುದ್ಧ ಪನ್ಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೂತನ ವಧು, ಸೋದರ ಮಾವನ ಮನೆಯಲ್ಲಿ ಬೆಳೆದಿದ್ದಳು. ಹೀಗಾಗಿ, ಆತ ಕೋಪದಲ್ಲಿ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾನೆ ಎಂದು ಪನ್ಹಾಳ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮಹೇಶ್ ಕೊಂಡುಭೈರಿ ತಿಳಿಸಿದ್ದಾರೆ.
ಇದನ್ನೂ ಓದಿ: ಯುವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಲು ಹೋಗಿದ್ದ ವಿವಾಹಿತನ ಹತ್ಯೆ, ನಾಲ್ವರು ಸೆರೆ