ನ್ಯೂಯಾರ್ಕ್:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ಝೆಲನ್ಸ್ಕಿ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿ, ಯುದ್ಧದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಂಘರ್ಷ ಕೊನೆಗಾಣಿಸಲು ಎಲ್ಲ ರೀತಿಯ ಶಾಂತಿಯುತ ಪರಿಹಾರದ ಬದ್ಧತೆ ಮತ್ತು ಈ ನಿಟ್ಟಿನಲ್ಲಿ ತಮ್ಮ ಕೊಡುಗೆಗಳ ಕುರಿತು ಭರವಸೆ ನೀಡಿದರು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ವಿಶ್ವಸಂಸ್ಥೆ ಶೃಂಗಸಭೆಯ ನಡುವೆ ಸೋಮವಾರ ಝೆಲನ್ಸ್ಕಿ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಕ್ರೇನ್ ಅಧ್ಯಕ್ಷರ ಮನವಿಯ ಮೇರೆಗೆ ಈ ಮಾತುಕತೆ ನಡೆಯಿತು ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ.
ಕಳೆದ ಆಗಸ್ಟ್ 23ರಂದು ಮೋದಿ ಉಕ್ರೇನ್ ರಾಜಧಾನಿ ಕೀವ್ಗೆ ಭೇಟಿ ನೀಡಿದ್ದರು. ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷರ ಆಹ್ವಾನದ ಮೇರೆಗೆ ಅವರು ಸಂಘರ್ಷಪೀಡಿತ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು.
ಝೆಲನ್ಸ್ಕಿ ಅವರೊಂದಿಗಿನ ಭೇಟಿಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, 'ಅಧ್ಯಕ್ಷ ಝೆಲನ್ಸ್ಕಿ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾದೆ. ಕಳೆದ ತಿಂಗಳು ಉಕ್ರೇನ್‌ನಲ್ಲಿ ತಿಳಿಸಿದಂತೆ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ನಾವು ಬದ್ಧ. ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಪರಿಹಾರ ನಿರ್ಣಯದ ಜೊತೆಗೆ ಶಾಂತಿ ಮತ್ತು ಸ್ಥಿರತೆಯ ಪುನರ್ಸ್ಥಾಪನೆಗೆ ಭಾರತ ಬೆಂಬಲ ನೀಡಲಿದೆ' ಎಂದು ಬರೆದುಕೊಂಡಿದ್ದಾರೆ.