ದೇರ್ ಅಲ್-ಬಲಾಹ್: ಹಮಾಸ್ ಉಗ್ರಗಾಮಿಗಳು ತಮ್ಮ ವಶದಲ್ಲಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಶನಿವಾರ ಜನಸಂದಣಿಯ ಮುಂದೆ ಮೆರವಣಿಗೆ ಮಾಡಿದ ಬಳಿಕ ಬಿಡುಗಡೆ ಮಾಡಿದರು. ಗಾಜಾ ಪಟ್ಟಿಯಲ್ಲಿ ಏರ್ಪಟ್ಟ ಕದನ ವಿರಾಮದ ಭಾಗವಾಗಿ, ಅದಕ್ಕೆ ಪ್ರತಿಯಾಗಿ ಇಸ್ರೇಲ್ ವಶದಲ್ಲಿರುವ 200 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಮಹಿಳಾ ಸೈನಿಕರನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅವರನ್ನು ಉಗ್ರಗಾಮಿಗಳು ಗಾಜಾ ನಗರದಲ್ಲಿ ಜನಸಂದಣಿಯ ಮುಂದೆ ಮೆರವಣಿಗೆ ಮಾಡಿದರು. ನಂತರ ಅವರನ್ನು ರೆಡ್ ಕ್ರಾಸ್ಗೆ ಹಸ್ತಾಂತರಿಸಿದರು. ನಾಲ್ವರು ಇಸ್ರೇಲಿ ಸೈನಿಕರಾದ ಕರೀನಾ ಅರಿಯೆವ್ (20), ಡೇನಿಯೆಲ್ಲಾ ಗಿಲ್ಬೋವಾ (20), ನಾಮಾ ಲೆವಿ (20), ಮತ್ತು ಲಿರಿ ಅಲ್ಬಾಗ್ (19), ಅವರನ್ನು ಹಮಾಸ್ ಅಕ್ಟೋಬರ್ 7, 2023 ರಂದು ನಡೆಸಿದ ದಾಳಿಯಲ್ಲಿ ಸೆರೆಹಿಡಿದಿತ್ತು.
ಇಸ್ರೇಲ್ ಹಾಗೂ ಹಮಾಸ್ ನಡುವಿನ ನಿರೀಕ್ಷಿತ ವಿನಿಮಯಕ್ಕೆ ಮುನ್ನವೇ ಟೆಲ್ ಅವಿವ್ ಹಾಗೂ ಗಾಜಾ ನಗರದಲ್ಲಿ ಜನಸಂದಣಿ ಸೇರಲು ಪ್ರಾರಂಭಿಸಿತ್ತು. ಕಳೆದ ವಾರಾಂತ್ಯದಲ್ಲಿ ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಆರಂಭವಾದ ಬಳಿಕ ಒಪ್ಪಂದದ ಪ್ರಕಾರ ಇದು ಎರಡನೇ ವಿನಿಮಯವಾಗಿದೆ.
ಭಾನುವಾರ ಕದನ ವಿರಾಮ ಪ್ರಾರಂಭವಾದಾಗ ಹಮಾಸ್ ವಶದಲ್ಲಿದ್ದ ಇಸ್ರೇಲ್‌ನ ಮೂರು ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಅದರ ಬೆನ್ನಲ್ಲೆ 90 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಇಂದು ಶನಿವಾರ ಇಸ್ರೇಲಿಗರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 120 ಮಂದಿ ಸೇರಿದಂತೆ 200 ಕೈದಿಗಳಿಗೆ ಪ್ರತಿಯಾಗಿ ನಾಲ್ಕು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಅವರನ್ನು ಗಾಜಾಕ್ಕೆ ಬಿಡುಗಡೆ ಮಾಡುವ ಅಥವಾ ವಿದೇಶಕ್ಕೆ ಕಳುಹಿಸುವ ನಿರೀಕ್ಷೆ ಇತ್ತು.
ಇದನ್ನೂ ಓದಿ: ಇಸ್ರೇಲ್ - ಹಮಾಸ್ ಕದನವಿರಾಮ ಒಪ್ಪಂದ: 471 ದಿನಗಳ ಬಳಿಕ ಇಸ್ರೇಲ್‌ಗೆ ಆಗಮಿಸಿದ 3 ಮಹಿಳಾ ಒತ್ತೆಯಾಳುಗಳು