ಬೆಂಗಳೂರು : ಶ್ರೀರಾಮುಲು ಅವರಿಗೆ ಬಿಜೆಪಿಯು ರಾಜ್ಯಸಭಾ ಸದಸ್ಯತ್ವ ನೀಡಿ, ಕೇಂದ್ರ ಸಚಿವರನ್ನಾಗಿ ಮಾಡದಿದ್ದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ವಾಲ್ಮೀಕಿ ಸಮುದಾಯವು ಬಿಜೆಪಿಯನ್ನು ಬಾಯ್ಕಾಟ್ ಮಾಡಬೇಕಾಗುತ್ತೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳವಳಿ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ವಾಲ್ಮೀಕಿ ಸ್ವಾಭಿಮಾನಿ ಸಂಘ, ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಶ್ರೀರಾಮುಲು ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಒಂದು ವಾರದೊಳಗೆ ಜನಾರ್ದನ್ ರೆಡ್ಡಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡದೇ ಹೋದಲ್ಲಿ ಉಗ್ರ ಹೋರಾಟದ ಬಿಸಿ ಎದುರಿಸಬೇಕಾಗುತ್ತದೆ. ಶ್ರೀರಾಮುಲು ಅವರಿಗೆ ಮಾಡಿದ ಅನ್ಯಾಯಕ್ಕೆ ಪರಿಹಾರವಾಗಿ ಬಿಜೆಪಿಯು ಅವರನ್ನು ಕೇಂದ್ರದ ಮಂತ್ರಿ ಮಾಡಲಿ, ಬಿಜೆಪಿಯ ಇತಿಹಾಸದಲ್ಲೇ ವಾಲ್ಮೀಕಿ ಸಮುದಾಯದ ನಾಯಕರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಉದಾಹರಣೆಯಿಲ್ಲ. ಈಗಲಾದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಲಿ ಎಂದು ಅವರು ಒತ್ತಾಯಿಸಿದರು.
ಸಂಡೂರು ಉಪಚುನಾವಣೆಯಲ್ಲಿ ಸೋಲಿನ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಜನಾರ್ದನ ರೆಡ್ಡಿ ಹೊರಬೇಕಿತ್ತು. ಆದರೆ, ತಮ್ಮ ತಪ್ಪನ್ನು ಮರೆಮಾಚಲು ಶ್ರೀರಾಮುಲು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರಾಮುಲು ಅವರು ಸಂಡೂರಿನಲ್ಲಿ ಪ್ರಚಾರ ಮಾಡದೇ ಹೋಗಿದ್ದರೆ, ಬಿಜೆಪಿ ಬರೀ ಸೋಲಲ್ಲ, ಹೀನಾಯ ಸೋಲು ಅನುಭವಿಸಬೇಕಿತ್ತು ಎಂದರು.
ಇಡೀ ದೇಶದಲ್ಲಿ 15 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯವನ್ನ ಕಡೆಗಣಿಸುವ ಮೂಲಕ ಬಿಜೆಪಿ ಪಕ್ಷ ತನ್ನ ವಿನಾಶಕ್ಕೆ ತಾನೇ ದಾರಿ ಮಾಡಿಕೊಳ್ಳುತ್ತಿದೆ. ಜನಾರ್ದನ ರೆಡ್ಡಿ ನಿರಾಧಾರವಾಗಿ ಆರೋಪ ಮಾಡುತ್ತಿದ್ದರೂ ಬಿಜೆಪಿ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ವಿಷಯ. ಈ ಧೋರಣೆ ಹೀಗೆ ಮುಂದುವರೆದರೆ, ವಾಲ್ಮೀಕಿ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದ ರಾಷ್ಟ್ರೀಯ ನಾಯಕ. ಈ ಸಮುದಾಯದ ಋಣ ಸಂದಾಯ ಮಾಡಬೇಕೆಂಬ ಆಶಯವಿದ್ದರೆ, ರಾಮುಲು ಅವರಿಗೆ ಅಧಿಕಾರ ನೀಡಿ ಎಂದು ರಾಜಣ್ಣ ಆಗ್ರಹಿಸಿದರು.
ಇದೇ ವೇಳೆ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ. ಎಂ ರಾಜು ಮಾತನಾಡಿ, ''ಎಸ್‌ಸಿ ಹಾಗೂ ಎಸ್‌ಟಿ ಸಮುದಾಯವು ಸದಾ ಸಹೋದರರಂತೆ ಇದೆ. ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೆ ಅದನ್ನು ಎಸ್‌ಸಿ ಸಮುದಾಯ ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಜೈಲಿಗೆ ಹೋದ ಜನಾರ್ದನ ರೆಡ್ಡಿಯ ಮಾತನ್ನು ಕೇಳಿ ಕೆಲ ನಾಯಕರು ಪಕ್ಷದ ಕಟ್ಟಾಳುವಾದ ರಾಮುಲು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಶ್ರೀರಾಮುಲು ಅವರ ಬಳಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು'' ಎಂದು ಆಗ್ರಹಿಸಿದರು.
ಈ ವೇಳೆ ಶ್ರೀರಾಮುಲು ಅಭಿಮಾನಿ ಬಳಗದ ಮುಖಂಡ ನವೀನ್, ಮದಕರಿ ಪ್ರದೀಪ್, ಮನಮೊಹನ್ RPI & SSD ಅಧ್ಯಕ್ಷರಾದ ಡಾ. ಎಂ. ವೆಂಕಟಸ್ವಾಮಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಮುನಿಸ್ವಾಮಿ, ಪ್ರಗತಿಪರ ಮುಖಂಡರಾದ ಪ್ರೋ. ಹರಿರಾಮ್ ಹಾಗೂ ಬಿಜೆಪಿಯು ಪ್ರಮುಖ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ಶ್ರೀರಾಮುಲುರನ್ನ ಜನಾರ್ದನ ರೆಡ್ಡಿ ಬೆಳೆಸಿಲ್ಲ, ಸ್ವಂತ ಶಕ್ತಿಯಿಂದ ಬೆಳೆದಿದ್ದಾರೆ: ವಾಲ್ಮೀಕಿ ಸಮಾಜ - REDDY RAMULU FIGHT