ಜೈಪುರ: ರಾಜಸ್ಥಾನದ ಅನೇಕ ನಗರಗಳಲ್ಲಿ ತಾಪಮಾನ ಇಳಿಮುಖವಾಗಿದ್ದು, ಮತ್ತೆ ತೀವ್ರ ಚಳಿ ಆರಂಭವಾಗಿದೆ. ಪೂರ್ವ ರಾಜಸ್ಥಾನದ ಫತೇಪುರ್ನಲ್ಲಿ ಸೋಮವಾರ ಬೆಳಗ್ಗೆ 0.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದರೆ, ರಾಜ್ಯದ ಪಶ್ಚಿಮ ಭಾಗದ ಸಂಗರಿಯಾದಲ್ಲಿ ಕನಿಷ್ಠ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜ್ಯದ ಅನೇಕ ನಗರಗಳಲ್ಲಿ ಕನಿಷ್ಠ ತಾಪಮಾನವು 10 ಡಿಗ್ರಿಗಳಿಗಿಂತ ಕಡಿಮೆ ದಾಖಲಾಗಿದ್ದು ರಾತ್ರಿಯಲ್ಲಿ ತೀವ್ರ ಚಳಿಯ ಅನುಭವವಾಗುತ್ತಿದೆ. ಸಿಕಾರ್ನಲ್ಲಿ 1.4 ಡಿಗ್ರಿ ಸೆಲ್ಸಿಯಸ್, ಅಜ್ಮೀರ್ನಲ್ಲಿ 7.1 ಡಿಗ್ರಿ ಸೆಲ್ಸಿಯಸ್, ಭಿಲ್ವಾರಾದಲ್ಲಿ 4.9, ವನಸ್ಥಲಿಯಲ್ಲಿ 6.0 ಮತ್ತು ಅಲ್ವಾರ್ನಲ್ಲಿ 3.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಇದಲ್ಲದೆ, ಜೈಪುರ ಮತ್ತು ಕೋಟಾದಂತಹ ನಗರಗಳಲ್ಲಿ ಕನಿಷ್ಠ ತಾಪಮಾನದಲ್ಲಿ 4 ಡಿಗ್ರಿಗಳಷ್ಟು ಕುಸಿತ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಶೇಖಾವತಿ ಪ್ರದೇಶದಲ್ಲಿ ತೀವ್ರ ಚಳಿ ಮುಂದುವರೆದಿದ್ದು, ಚುರು ಮತ್ತು ಸಿಕಾರ್ನಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿಗಿಂತ ಕಡಿಮೆಯಾಗಿದೆ.
ಸಿಕಾರ್ನಲ್ಲಿ 3.5 ಡಿಗ್ರಿ ಮತ್ತು ಚುರುವಿನಲ್ಲಿ 3.6 ಡಿಗ್ರಿ ತಾಪಮಾನ ದಾಖಲಾಗಿದೆ. ಹಾಗೆಯೇ ಕೋಟಾದಲ್ಲಿ ಋತುವಿನ ಅತ್ಯಂತ ಶೀತ ರಾತ್ರಿಯ ಅನುಭವವಾಗಿದ್ದು, ಇಲ್ಲಿನ ಕನಿಷ್ಠ ತಾಪಮಾನ 6.6 ಡಿಗ್ರಿಗೆ ಇಳಿದಿದೆ.
ರಾಜ್ಯದ ಪಶ್ಚಿಮದ ಪ್ರದೇಶಗಳಲ್ಲಿ ಫೆಬ್ರವರಿ ಆರಂಭದಲ್ಲಿ ಗಮನಾರ್ಹ ಹವಾಮಾನ ಬದಲಾವಣೆಯಾಗಬಹುದು ಎಂದು ಹವಾಮಾನ ಇಲಾಖೆ (ಎಂಇಟಿ) ಹೊಸ ಎಚ್ಚರಿಕೆ ನೀಡಿದ್ದು, ಇದರಿಂದ ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಶೀತ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜನವರಿ 29 ರ ನಂತರ ಶೀತ ಗಾಳಿಯ ಪರಿಣಾಮ ಕೊಂಚ ತಗ್ಗಲಿದೆ.
ಜನವರಿ 28 ರವರೆಗೆ ರಾಜಸ್ಥಾನದಾದ್ಯಂತ ಸ್ಪಷ್ಟ ಆಕಾಶ ಮತ್ತು ಬಿಸಿಲು ಇರಬಹುದು ಎಂದು ಜೈಪುರದ ಹವಾಮಾನ ಕೇಂದ್ರ ತಿಳಿಸಿದೆ. ರಾತ್ರಿಯ ತಾಪಮಾನವು ಕಡಿಮೆ ಇರಲಿದ್ದು, ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಚಳಿ ತೀವ್ರವಾಗಲಿದೆ. ಆದರೆ ಹಗಲಿನಲ್ಲಿ ಬಿಸಿಲು ಮೂಡುವುದರಿಂದ ತಾಪಮಾನ ಒಂದಿಷ್ಟು ಏರಿಕೆಯಾಗಬಹುದು. ಜನವರಿ 29 ರಿಂದ ಸ್ಥಳೀಯ ಹವಾಮಾನದಲ್ಲಿನ ಬದಲಾವಣೆಯಿಂದ ಭರತ್ ಪುರ ಮತ್ತು ಜೈಪುರ ವಿಭಾಗಗಳ ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರಬಹುದು. ಆದರೆ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ವಕ್ಫ್ ಮಸೂದೆ: 572 ತಿದ್ದುಪಡಿಗಳನ್ನು ಸೂಚಿಸಿದ ಸಂಸದೀಯ ಸಮಿತಿ ಸದಸ್ಯರು - WAQF BILL