ಹಾವೇರಿ: ಬಿಗ್ ಬಾಸ್ ವಿನ್ನರ್ ಹನುಮಂತು ಅವರ ಚಿಕ್ಕಪ್ಪ ದೇವಪ್ಪ ನಿಧನರಾಗಿದ್ದಾರೆ. ಗೆಲುವನ್ನು ಸಂಭ್ರಮಿಸಬೇಕಿದ್ದ ಕನ್ನಡ ಬಿಗ್ ಬಾಸ್ 11ರ ವಿಜೇತನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ಹನುಮಂತನ ಮನೆ ಇದೆ. ಇಂದು ಇಲ್ಲಿ ಸಂತಸ ತುಂಬಿರಬೇಕಿತ್ತು. ಆದರೆ ಹನುಮಂತು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯುವ ಮುನ್ನವೇ ಅವರ ಚಿಕ್ಕಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಕೂಡ ಮುಗಿದಿದೆ. ಹನುಮಂತನ ನೋಡಲು ಊರಿಗೆ ಆಗಮಿಸುತ್ತಿರುವ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
ಹನುಮಂತನ ಗೆಲುವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಮನೆ ಸದಸ್ಯರು ಬೆಂಗಳೂರಿಗೆ ಬಂದಿದ್ದರು. ಹೀಗಾಗಿ, ಮನೆಯಲ್ಲಿ ಹನುಮಂತನ ಮಾವ ಮತ್ತು ಅತ್ತಿಗೆ ಮಾತ್ರವಿದ್ದಾರೆ. ಸೂತಕ ಮುಗಿಯುವವರೆಗೆ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಸಂಬಂಧಿಕರು ನಿರ್ಧರಿಸಿದ್ದಾರೆ.
ಮೂರು ದಿನದ ಕಾರ್ಯ ಮುಗಿದ ಬಳಿಕ ಅಭಿಮಾನಿಗಳು ಭೇಟಿ ನೀಡಬಹುದು. ಸದ್ಯ ಬೆಂಗಳೂರಿನಲ್ಲಿ ಇರುವ ಹನುಮಂತನ ಕುಟುಂಬಸ್ಥರು ಇವತ್ತು ರಾತ್ರಿ ಅಥವಾ ನಾಳೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕುರಿ ಕಾಯುವ ಹಳ್ಳಿ ಹೈದನ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ : ಇದು ಸರಳ ವ್ಯಕ್ತಿತ್ವಕ್ಕೆ ಸಿಕ್ಕ ಗೆಲುವು