ಬೆಂಗಳೂರು: ರಾಜಕಾರಣಿಗಳ ಹೆಸರು ಬಳಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ. ರೇಖಾ(38), ಈಕೆಯ ಪತಿ ಮಂಜುನಾಥಚಾರಿ(40) ಮತ್ತು ಸ್ನೇಹಿತ ಚೇತನ್(35) ಬಂಧಿತರು.
ಇತ್ತೀಚೆಗೆ ನಿಸಾರ್ ಅಹ್ಮದ್ ಎಂಬವರಿಗೆ 6 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ರೇಖಾ ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ಗಳ ಸಂಪರ್ಕ ಹೊಂದಿದ್ದು, ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ದೂರುದಾರ ನಿಸಾರ್ ಅಹ್ಮದ್ ಸಾಲ ಪಡೆಯಲು ರೇಖಾಳನ್ನು ಸಂಪರ್ಕಿಸಿದ್ದರು. ನಿಸಾರ್ ಅಹ್ಮದ್ ಅಪಾರ ಪ್ರಮಾಣದ ಹಣ ಹೊಂದಿರುವ ವಿಚಾರ ರೇಖಾ ಗಮನಕ್ಕೆ ಬಂದಿದೆ. "2009ರಲ್ಲಿ ನಡೆದಿದ್ದ ಕಾರ್ಲ್‌ಟನ್ ಟವರ್ ಬೆಂಕಿ ದುರಂತದಲ್ಲಿ ನಾನೇ ಪ್ರತ್ಯಕ್ಷ್ಯ ಸಾಕ್ಷಿಯಾಗಿದ್ದು, ಸಾಕ್ಷಿ ಹೇಳದಂತೆ ಮಾಲೀಕ ಹಾಗೂ ಇತರರು 25 ಕೋಟಿ ರೂ. ಹಣ ಜಮೆ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ನಾನು ತೆರಿಗೆ ಪಾವತಿ ಮಾಡಬೇಕಿದೆ. ನೀವು 1 ಕೋಟಿ ರೂ. ಕೊಟ್ಟರೆ, 5 ಕೋಟಿ ರೂ. ವಾಪಸ್ ಕೊಡುತ್ತೇನೆ" ಎಂದು ನಿಸಾರ್ಗೆ ರೇಖಾ ಆಮಿಷವೊಡ್ಡಿದ್ದಳು. ಈ ಮಾತು ನಂಬಿದ ನಿಸಾರ್, ರೇಖಾ ಖಾತೆಗೆ 5.75 ಕೋಟಿ ರೂ. ವರ್ಗಾವಣೆ ಮಾಡಿದ್ದರು. ನಂತರವೂ ಆರೋಪಿ ರೇಖಾ ಹಣಕ್ಕೆೆ ಬೇಡಿಕೆಯಿಟ್ಟಾಗ, ತಮ್ಮ ಆಪ್ತರ ಮೂಲಕ ಪರಿಶೀಲಿಸಿದಾಗ ಆಕೆ ವಂಚಕಿ ಎಂಬುದು ಗೊತ್ತಾಗಿದೆ. ಹಣ ಕೇಳಿದಾಗ ರೇಖಾ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಕುರಿತು ನಿಸಾರ್ ಅಹ್ಮದ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರೇಖಾ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯಿದೆ.
ರಾಜಕಾರಣಿಗಳ ಹೆಸರಲ್ಲಿ ವಂಚನೆ: ರಾಜಕಾರಣಿಗಳ ಹೆಸರಿನಲ್ಲೂ ರೇಖಾ ವಂಚಿಸುತ್ತಿದ್ದಳು ಎಂಬುದು ಗೊತ್ತಾಗಿದೆ. ಉತ್ತರ ಕರ್ನಾಟಕದ ಮಾಜಿ ಶಾಸಕರೊಬ್ಬರ ಹೆಸರಿನಲ್ಲೂ ವಂಚಿಸಿದ್ದರು. ಅದೇ ರೀತಿ ಹಾಲಿ ಶಾಸಕರು, ಸಚಿವರ ಜೊತೆ ಪರಿಚಯಸ್ಥಳಂತೆ ಫೋಟೋ ತೆಗೆಸಿಕೊಂಡು, ಬಳಿಕ ಕೆಲ ಉದ್ಯಮಿಗಳಿಗೆ ತೋರಿಸಿ, ಜನಪ್ರತಿನಿಧಿಗಳ ಆಪ್ತರೆಂದು ನಂಬಿಸಿ ಸರ್ಕಾರಿ ಕೆಲಸ ಮಾಡಿಸಿಕೊಡುವುದಾಗಿ ಹಣ ಸುಲಿಗೆ ಮಾಡುತ್ತಿದ್ದಳು ಎಂದು ಗೊತ್ತಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದುಪ್ಪಟ್ಟು ಹಣದ ಆಸೆ ತೋರಿಸಿ ಕೋಟ್ಯಂತರ ರೂ. ಪಂಗನಾಮ ಆರೋಪ: ಡಿಸಿ ಮುಂದೆ ಕಣ್ಣೀರಿಟ್ಟ ಮಹಿಳೆಯರು