ಮೈಸೂರು: ದೆಹಲಿ ಗಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ಹೋರಾಡುತ್ತಿರುವ ಜಗಜಿತ್ ಸಿಂಗ್ ದಲೈವಾಲಾ ಅವರ 62 ದಿನದ ಉಪವಾಸ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ಧಲೈವಾಲಾ ಅವರು 62 ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಇದನ್ನು ಬೆಂಬಲಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಮೈಸೂರಿನಲ್ಲಿ ಬೆಂಬಲಿಸಲಾಯಿತು.
ನಗರದ ಎಪಿಎಂಸಿ ವೃತ್ತದಿಂದ ಹೊರಟು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೋಳ ಬಳಿ ಇರುವ ಟೋಲ್ ತನಕ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಟೋಲ್ ಬಂದ್ ಮಾಡಿ ಕೇಂದ್ರ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದರು. ಸುಮಾರು 6 ಕಿ.ಮೀ ತನಕ ಎರಡು ಭಾಗದಲ್ಲೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ದಕ್ಷಿಣ ಭಾರತ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, "ದೇಶಾದ್ಯಂತ ಭಾನುವಾರ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ ರೈತರಿಗೆ ಸ್ವಾತಂತ್ರ್ಯವೇ ಸಿಕ್ಕಿಲ್ಲ. ದೇಶದ ರೈತರ ಒಳಿತಿಗಾಗಿ 62 ದಿನಗಳಿಂದ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೈವಾಲಾ ಅವರು ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮನವಿ ಮೇರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಳವಳಿಯನ್ನು ಕೈಬಿಟ್ಟಿಲ್ಲ, ರೈತರ ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗಿದೆ. ಮೈಸೂರು, ಚಾಮರಾಜನಗರ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ರಾಯಚೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲಾಗುತ್ತಿದೆ" ಎಂದರು.
"ಫೆಬ್ರವರಿ ಎರಡನೇ ವಾರದಲ್ಲಿ ಕರ್ನಾಟಕದ ರೈತರ ತಂಡ ದೆಹಲಿ ಗಡಿ ಚಳವಳಿಗೆ ಹೋಗುತ್ತಿದೆ. ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ಧೋರಣೆ ವಿರುದ್ಧ ಹೋರಾಟ ಮಾಡಲಾಗುವುದು" ಎಂದು ಹೇಳಿದರು.
ಪ್ರತಿಭಟನಾ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಅತ್ತಳ್ಳಿ ದೇವರಾಜ್, ನಾಗರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ್, ನೀಲಕಂಠಪ್ಪ, ವಿಜಯೇಂದ್ರ, ಸಿದ್ದೇಶ್, ವೆಂಕಟೇಶ್, ರಾಜೇಶ್, ಪ್ರಭುಸ್ವಾಮಿ, ಮಂಜುನಾಥ್, ಗಿರೀಶ್, ಕೆಂಡಗಣಸ್ವಾಮಿ, ಸ್ವಾಮಿ ಪ್ರಸಾದ್ ನಾಯ್ಕ್, ಪ್ರದೀಪ್, ಗೌರಿಶಂಕರ್, ಗುರುಸ್ವಾಮಿ, ಕೆಂಡಗಂಣಪ್ಪ, ಸುನಿಲ್, ಕಮಲಮ್ಮ, ಕೂಡನಹಳ್ಳಿ ಸೋಮಣ್ಣ ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ದುಪ್ಪಟ್ಟು ಹಣದ ಆಸೆ ತೋರಿಸಿ ಕೋಟ್ಯಂತರ ರೂ. ಪಂಗನಾಮ : ಡಿಸಿ ಮುಂದೆ ಕಣ್ಣೀರಿಟ್ಟ ಮಹಿಳೆಯರು