ಮಾಸ್ಕೋ, ರಷ್ಯಾ:ಭಾರತಕ್ಕೆ ರಷ್ಯಾದಿಂದ ಆಗುತ್ತಿರುವ ಕಚ್ಚಾ ತೈಲ ಪೂರೈಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ತೈಲಕ್ಕೆ ಸಂಬಂಧಿಸಿದಂತೆ ಯಾವುದೇ ಪಾವತಿ ಸಮಸ್ಯೆಗಳು ಎದುರಾಗಿಲ್ಲ ಅಲ್ಲಿನ ಸರ್ಕಾರ ಹೇಳಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.
ಭಾರತಕ್ಕೆ ರಷ್ಯಾದ ತೈಲ ಪೂರೈಕೆಯನ್ನು ಸ್ಥಿರವಾಗಿ, ಯಾವುದೇ ಅಡೆ ತಡೆ ಇಲ್ಲದಂತೆ ನಿರ್ವಹಿಸಲಾಗಿದೆ. ರಷ್ಯಾದಿಂದ ರಫ್ತು ಮಾಡುವ ತೈಲಕ್ಕಾಗಿ ಮಾಡುವ ಪಾವತಿ ವಿಧಾನಗಳನ್ನು ನಿರ್ಧರಿಸುವಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಮಾರಿಯಾ ಜಖರೋವಾ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಆಯಾಯ ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ವಿನಿಮಯವಾಗಿ ಪಾವತಿ ಮಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಒತ್ತಿ ಹೇಳಿದ್ದಾರೆ. ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡುವಾಗ ಪಾಶ್ಚಿಮಾತ್ಯರು ವಿಧಿಸಿದ ನಿಯಮಗಳನ್ನು ಅವಲಂಬಿಸದಿರಲು ನಮ್ಮ ನಡುವಣ ವ್ಯವಹಾರವು ಸಾಧ್ಯವಾಗಿಸುತ್ತದೆ ಎಂದು ಜಖರೋವಾ ಹೇಳಿದ್ದಾರೆಂದು TASS ಉಲ್ಲೇಖಿಸಿದೆ.
ಉಕ್ರೇನ್‌ನೊಂದಿಗಿನ ಮಿಲಿಟರಿ ಸಂಘರ್ಷದ ಮಧ್ಯೆ ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿಲುವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವರ್ಷದ ಫೆಬ್ರವರಿಯಲ್ಲಿ ಪುನರುಚ್ಚರಿಸಿದ್ದರು. ಭಾರತ ಮತ್ತು ರಷ್ಯಾ ಯಾವಾಗಲೂ ಸ್ಥಿರ ಮತ್ತು ಸೌಹಾರ್ದ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗಲು ಬಯಸಿದೆ. ಮತ್ತು ಮಾಸ್ಕೋ ನವದೆಹಲಿಯ ಹಿತಾಸಕ್ತಿಗಳನ್ನು ಎಂದಿಗೂ ನೋಯಿಸಿಲ್ಲ ಎಂದು ಅವರು ಹೇಳಿದ್ದಾರೆ.