ಲಾಹೋರ್ (ಪಾಕಿಸ್ತಾನ) : ಭಾರತದ ವಿರುದ್ಧ ಕುಕೃತ್ಯಗಳಿಗೆ ತನ್ನ ನೆಲದಲ್ಲಿ ಪಾಕಿಸ್ತಾನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಬಾಂಗ್ಲಾದೇಶ, ಇದೀಗ ಆ ದೇಶದ ನಿವಾಸಿಗಳಿಗೆ ತನ್ನ ರಾಷ್ಟ್ರಕ್ಕೆ ಬರಲು ವೀಸಾ ಸೇವೆಯನ್ನು ಮತ್ತಷ್ಟು ಸರಳೀಕರಿಸಿದೆ. ನೆರೆಯ ಮುಸ್ಲಿಂ ರಾಷ್ಟ್ರಗಳ ಈ ನಡೆಯು ಭಾರತಕ್ಕೆ ಆತಂಕದ ವಿಚಾರವಾಗಿದೆ.
ಪಾಕಿಸ್ತಾನದೊಂದಿಗಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಉತ್ಸುಕವಾಗಿದೆ. ಹೀಗಾಗಿ, ಆ ದೇಶದ ಜನರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪಾಕಿಸ್ತಾನದ ರಾಯಭಾರ ಕಚೇರಿಗಳ ಮುಖ್ಯಸ್ಥರಿಗೆ ವೀಸಾ ನೀಡುವಾಗ ಸರ್ಕಾರದ ಅನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಲಾಗಿದೆ ಎಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶದ ಹೈಕಮಿಷನರ್ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ಜೊತೆಗೆ, ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಪ್ರಮುಖ ಆದ್ಯತೆಯಾಗಿರಬೇಕು. ಕಳೆದೊಂದು ದಶಕದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ವೃದ್ಧಿಯಾಗಿಲ್ಲ. ಇದಕ್ಕೆ ಇತಿಶ್ರೀ ಹಾಡಲು ಮೊಹಮದ್ ಯೂನುಸ್ ಸರ್ಕಾರ ಮುಂದಾಗಿದೆ ಎಂದು ಹುಸೇನ್ ಹೇಳಿದ್ದಾರೆ.
180 ಮಿಲಿಯನ್ ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶವು ಪಾಕಿಸ್ತಾನದ ಪ್ರಮುಖ ಮಾರುಕಟ್ಟೆಯಾಗಿದೆ. ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಸಾಮರ್ಥ್ಯ ಹೆಚ್ಚಾದಲ್ಲಿ ಅದರ ಲಾಭ ಪಾಕಿಸ್ತಾನಕ್ಕೆ ದೊರೆಯಲಿದೆ. ಹೀಗಾಗಿ, ದಕ್ಷಿಣ ಏಷ್ಯಾದ ದೇಶಗಳ ನಡುವೆ ಹೆಚ್ಚಿನ ಸಹಯೋಗಕ್ಕೆ ರಾಜತಾಂತ್ರಿಕ ಅಧಿಕಾರಿ ಕರೆ ನೀಡಿದ್ದಾರೆ.
ಇದನ್ನೂ ಓದಿ: 'ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ': ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಸೂಚನೆ