ಕರ್ನಾಟಕ

karnataka

ETV Bharat / international

ಜಪಾನ್ ಏರ್​ಲೈನ್ಸ್​ ಲಗೇಜ್ ಚೆಕ್-ಇನ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ: ವಿಮಾನ ಹಾರಾಟ ವಿಳಂಬ - JAPAN AIRLINES

ಜಪಾನ್ ಏರ್ ಲೈನ್ಸ್ ನ ಲಗೇಜ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಲಾಗಿದೆ.

ಜಪಾನ್ ಏರ್​ಲೈನ್ಸ್​ ಲಗೇಜ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ: ವಿಮಾನ ಹಾರಾಟ ವಿಳಂಬ
ಜಪಾನ್ ಏರ್​ಲೈನ್ಸ್​ ಲಗೇಜ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ: ವಿಮಾನ ಹಾರಾಟ ವಿಳಂಬ (IANS)

By ETV Bharat Karnataka Team

Published : Dec 26, 2024, 3:16 PM IST

ಟೋಕಿಯೊ: ಜಪಾನ್ ಏರ್​ಲೈನ್ಸ್​ನ ಲಗೇಜ್ ಚೆಕ್-ಇನ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ಕಂಪನಿ ಗುರುವಾರ ಹೇಳಿದೆ. ಇದರಿಂದ ಕನಿಷ್ಠ 24 ದೇಶೀಯ ವಿಮಾನ ಹಾರಾಟದಲ್ಲಿ ವಿಳಂಬವಾಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಮೇಲೂ ಇದು ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ಬೆಳಿಗ್ಗೆ 7:25 ರ ಸುಮಾರಿಗೆ ಸೈಬರ್ ದಾಳಿಯಿಂದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದವು ಎಂದು ವಿಮಾನಯಾನ ಸಂಸ್ಥೆ ವರದಿ ಮಾಡಿದೆ. ಹೀಗಾಗಿ ಜಪಾನ್ ಏರ್​ಲೈನ್ಸ್​ ದಿನದ ಉಳಿದ ಅವಧಿಗಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿತು. ಆದರೆ ಈ ಮುನ್ನವೇ ಖರೀದಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರು ಅವುಗಳನ್ನು ಬಳಸಿ ಪ್ರಯಾಣಿಸಬಹುದು.

ಲಗೇಜ್ ವ್ಯವಸ್ಥೆಯ ಮೇಲೆ ಡಿನೈಯಲ್ ಆಫ್ ಸರ್ವಿಸ್ ದಾಳಿ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ಹಲವಾರು ಮೂಲಗಳಿಂದ ನೆಟ್​​ವರ್ಕ್ ವ್ಯವಸ್ಥೆಗೆ ಡೇಟಾ ಮಹಾಪೂರವನ್ನು ಹರಿಸಿ ಇಡೀ ಮಾಹಿತಿ ಜಾಲ ಕುಸಿಯುವಂತೆ ಮಾಡುವುದು ಡಿನೈಯಲ್ ಆಫ್ ಸರ್ವಿಸ್ ದಾಳಿಯಾಗಿದೆ.

ಸೈಬರ್ ದಾಳಿಯನ್ನು ತೆರವುಗೊಳಿಸಲು ಮತ್ತು ಅದರ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿರುವುದಾಗಿ ಜಪಾನ್ ಏರ್​ಲೈನ್ಸ್ ಹೇಳಿದೆ. ದಾಳಿಗೊಳಗಾದ ರೂಟರ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಸಮಸ್ಯೆಗೊಳಗಾದ ಪ್ರಯಾಣಿಕರಿಗೆ ತ್ವರಿತವಾಗಿ ಸಹಾಯ ಮಾಡುವಂತೆ ಭೂಮಿ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯವು ಜಪಾನ್ ಏರ್​ಲೈನ್ಸ್​ಗೆ ತಿಳಿಸಿದೆ ಎಂದು ಜಪಾನ್​ ಸರ್ಕಾರದ ಉನ್ನತ ವಕ್ತಾರ, ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಲ್ ನಿಪ್ಪಾನ್ ಏರ್ ವೇಸ್, ಸ್ಕೈಮಾರ್ಕ್ ಏರ್ ಲೈನ್ಸ್, ಸೋಲಾಸೀಡ್ ಏರ್ ಮತ್ತು ಸ್ಟಾರ್ ಫ್ಲೈಯರ್ ಸೇರಿದಂತೆ ಇತರ ಯಾವುದೇ ವಿಮಾನಯಾನ ಸಂಸ್ಥೆಗಳ ಮೇಲೆ ಯಾವುದೇ ಸೈಬರ್ ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಮತ್ತು ಅವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.

ಕಂಪ್ಯೂಟರ್ ಮೂಲಸೌಕರ್ಯ ಜಾಲದಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಅದರ ಕಂಟೆಂಟ್ ಗೌಪ್ಯತೆ, ಸಮಗ್ರತೆ ಅಥವಾ ಲಭ್ಯತೆಗಳನ್ನು ಉಲ್ಲಂಘಿಸುವುದು ಸೈಬರ್ ದಾಳಿಯಾಗಿದೆ. ವಾಸ್ತವದಲ್ಲಿ ಯಾವುದೇ ಕಂಪ್ಯೂಟರ್ ಆಗಿದ್ದರೂ ಅದು ಯಾವುದಾದರೊಂದು ರೀತಿಯಲ್ಲಿ ಸೈಬರ್ ದಾಳಿಗೆ ಒಳಗಾಗಬಹುದು.

ಪರಿಪೂರ್ಣ ಸುರಕ್ಷಿತ ವ್ಯವಸ್ಥೆಯನ್ನು ರಚಿಸುವುದು ಅಸಾಧ್ಯ ಅಥವಾ ಅಪ್ರಾಯೋಗಿಕವಾಗಿದ್ದರೂ, ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತವಾಗಿಸುವ ಅನೇಕ ರಕ್ಷಣಾ ಕಾರ್ಯವಿಧಾನಗಳಿವೆ. ಒಟ್ಟಾರೆಯಾಗಿ ಮಾಹಿತಿ ಭದ್ರತೆ ವ್ಯವಸ್ಥೆಯು ಇಂದು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಮುಖ್ಯತೆಯ ಕ್ಷೇತ್ರವಾಗಿದೆ.

ಇದನ್ನೂ ಓದಿ : ಯೂನುಸ್ ಸರ್ಕಾರದಿಂದ ರಾಜಕೀಯ ದ್ವೇಷ ಸಾಧನೆ: ಶೇಖ್ ಹಸೀನಾ ಪುತ್ರ ವಾಜೆದ್ ಕಿಡಿ - SHEIKH HASINA SON WAJED

ABOUT THE AUTHOR

...view details