ಮುಂಬೈ (ಮಹಾರಾಷ್ಟ್ರ) : ಅಮೆರಿಕನ್ ಡಾಲರ್ ಎದುರು ದಾಖಲೆಯ ಗರಿಷ್ಠ ಮಟ್ಟಕ್ಕೆ ಕುಸಿದಿರುವ ಭಾರತದ ರೂಪಾಯಿ ಮೌಲ್ಯ ಮಂಗಳವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡಿದೆ. ಈ ಹಿಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಇಂದು ಡಾಲರ್ ಎದುರು 8 ಪೈಸೆ ಏರಿಕೆಯಾಗಿ 86.62ಕ್ಕೆ ಸ್ಥಿರವಾಯಿತು.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಬಂಡವಾಳ ಹಿಂತೆಗೆತದ ಹಿನ್ನಡೆಯ ಹೊರತಾಗಿಯೂ, ದೇಶೀಯ ಷೇರು ಮಾರುಕಟ್ಟೆಗಳ ಏರಿಕೆ, ಡಾಲರ್ ನಿಯಮ ಸಡಿಲವಾಗಿದ್ದು, ಭಾರತದ ರೂಪಾಯಿಗೆ ಬಲ ತುಂಬಿತು. ಇದರಿಂದ ಮೌಲ್ಯದಲ್ಲಿ ಏರಿಕೆ ದಾಖಲಿಸಿತು.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಮಂಗಳವಾರ ರೂಪಾಯಿ 86.57 ರಿಂದ ಆರಂಭಗೊಂಡಿತು. ಬಳಿಕ ಮಧ್ಯಂತರದಲ್ಲಿ 86.45 ಕ್ಕೆ ತಲುಪಿತ್ತು. ದಿನದ ಕೊನೆಯಲ್ಲಿ 86.62 ಕ್ಕೆ ಮುಕ್ತಾಯವಾಯಿತು. ಇದು ಹಿಂದಿನ ದಿನವಾದ ಮಂಗಳವಾರದ 86.70 ಕ್ಕಿಂತಲೂ 8 ಪೈಸೆ ಲಾಭವಾಯಿತು.
ಒಂದೇ ದಿನ ಗರಿಷ್ಠ ಕುಸಿತ: ಸೋಮವಾರವಷ್ಟೆ, ರೂಪಾಯಿ ಮೌಲ್ಯವು ಸುಮಾರು ಎರಡು ವರ್ಷಗಳಲ್ಲಿ ಒಂದೇ ದಿನದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿತ್ತು. ಡಾಲರ್ ಎದುರು 66 ಪೈಸೆ ಇಳಿಯುವ ಮೂಲಕ ಸಾರ್ವಕಾಲಿಕ 86.70ಕ್ಕೆ ತಲುಪಿತ್ತು. ಇದಕ್ಕೂ ಮೊದಲು ಅಂದರೆ, 2023ರ ಫೆಬ್ರವರಿ 6 ರಂದು ದಾಖಲೆಯ 68 ಪೈಸೆ ಕುಸಿತ ಕಂಡಿತ್ತು.
ಡಿಸೆಂಬರ್ ಅಂತ್ಯದಿಂದ ರೂಪಾಯಿ ಮೌಲ್ಯವು ಕುಸಿಯುತ್ತಾ ಸಾಗಿದೆ. 2024ರ ಡಿಸೆಂಬರ್ 19 ರಂದು ಮೊದಲ ಬಾರಿಗೆ ಡಾಲರ್ ಎದುರು 85 ರೂಪಾಯಿ ಗಡಿ ದಾಟಿತ್ತು. ಬಳಿಕ ಸತತ ಇಳಿಕೆ ಕಂಡು ದಿನದಲ್ಲಿ ಒಂದು ರೂಪಾಯಿ ಮೌಲ್ಯ ಕಳೆದುಕೊಂಡಿತ್ತು.
ಮಾರುಕಟ್ಟೆಗಳ ಪ್ರಭಾವ: ದೇಶೀಯ ಮಾರುಕಟ್ಟೆಗಳಲ್ಲಿ ಸ್ವಲ್ಪ ಚೇತರಿಕೆ ಮತ್ತು ಅಮೆರಿಕ ಡಾಲರ್ ದುರ್ಬಲವಾದ ಕಾರಣ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ. ಚಿಲ್ಲರೆ ಹಣದುಬ್ಬರ ಇಳಿಕೆ ಮತ್ತು ಡಾಲರ್ ಸಡಿಲಿಕೆಯು ರೂಪಾಯಿಗೆ ಬಲ ತುಂಬಿದೆ ಎಂದು ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.
ಜಾಗತಿಕ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 0.10 ರಷ್ಟು ಏರಿಕೆಯಾಗಿ ಯುಎಸ್ ಡಾಲರ್ 81.09 ಕ್ಕೆ ತಲುಪಿದೆ.
ಷೇರು ಮಾರುಕಟ್ಟೆಯಲ್ಲಿ ಜಿಗಿತ: ಇನ್ನೂ, ಕುಸಿತದ ಹಾದಿಯಲ್ಲಿದ್ದ ಮುಂಬೈ ಷೇರು ಮಾರುಕಟ್ಟೆಯೂ ಜಿಗಿತ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 169.62 ಅಂಕಗಳು ಏರಿಕೆಯಾಗಿ 76,499.63 ರಲ್ಲಿ ಸ್ಥಿರವಾದರೆ, ನಿಫ್ಟಿ 90.10 ಪಾಯಿಂಟ್ ಹೆಚ್ಚಿಸಿಕೊಂಡು 23,176.05ನಲ್ಲಿ ದಿನದ ವಹಿವಾಟು ಮುಗಿಸಿತು.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್, RBI ನಿಂದ ಹೊಸ ನಿಯಮ: ಇನ್ನು ಹಾಗೆ ಮಾಡುವುದು ಕಷ್ಟ