ಲಾಸ್ ಏಂಜಲೀಸ್, ಅಮೆರಿಕ: ಯುನೈಟೆಡ್ ಸ್ಟೇಟ್ನ ಎರಡನೇ ಅತಿದೊಡ್ಡ ನಗರ ಲಾಸ್ ಏಂಜಲೀಸ್ನಲ್ಲಿ ಹರಡುತ್ತಿರುವ ಕಾಳ್ಗಿಚ್ಚಿಗೆ ತಮ್ಮ ಮನೆಗಳು ಆಹುತಿಯಾಗುತ್ತಿರುವುದನ್ನು ಕಂಡ ಅನೇಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ದುರಂತದಲ್ಲಿ 13 ಮಿಲಿಯನ್ ಜನರು ಸ್ಥಳಾಂತಗೊಂಡಿದ್ದು, ಇದೀಗ ಬೆಂಕಿಯಲ್ಲಿ ಸುಟ್ಟು ಕರಕಲಾದ ಮನೆಗಳನ್ನು ಕಂಡು ಮರಗುತ್ತಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ.
ಕಳೆದ ಏಂಟು ತಿಂಗಳಿನಿಂದ ಮಳೆ ಕಾಣದ ಲಾಸ್ ಏಂಜಲೀಸ್ನಲ್ಲಿ ಶುಕ್ರವಾರ ಬೆಂಕಿ ಆರಿಸುವ ಪ್ರಕ್ರಿಯೆಗೆ ಗಾಳಿ ಶಾಂತವಾಗುವ ಮೂಲಕ ಕೊಂಚ ಸಹಾಯ ಮಾಡಿತು. ಪಾಲಿಸೇಡ್ನ ಪೂರ್ವ ಭಾಗದಲ್ಲಿ ಬೆಂಕಿ ಕೆನ್ನಾಲಿಗೆ ಹರಡಿದ್ದು ಶುಕ್ರವಾರ ಸಂಜೆ ಕೂಡ ಸ್ಥಳಾಂತರ ಕೆಲಸ ಮುಂದುವರೆದಿದೆ.
![la-fires-families-in-shock-begin-to-visit-their-charred-homes-in-the-area](https://etvbharatimages.akamaized.net/etvbharat/prod-images/11-01-2025/23301599_ggtg.jpg)
ಅಲ್ಟಡೆನಾನಲ್ಲಿ ಬೆಂಕಿ ಕೆನ್ನಾಲಿಗೆ ಕಾಣಿಸಿಕೊಂಡು ತಮ್ಮ ಮನೆ ಕೂಡ ಆಹುತಿಯಾಗುವುದನ್ನು ಕಂಡ ಬ್ರಿಡ್ಗೆಟ್ ಬರ್ಗ್, ಎರಡು ದಿನದ ಬಳಿಕ ಕುಟುಂಬದೊಂದಿಗೆ ಮನೆಯಿದ್ದ ಸ್ಥಳಕ್ಕೆ ಮರಳಿದ್ದಾರೆ. ಇಲ್ಲಿ ಆಕೆ ತನ್ನ ಮನೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಕಂಬನಿ ಮಿಡಿದಿದ್ದಾರೆ.
ಎಲ್ಎಯಿಂದ 25 ಮೈಲಿವರೆಗೆ ಹರಡಿರುವ ಕಾಳ್ಗಿಚ್ಚಿನಿಂದ ಮನೆ, ಅಪಾರ್ಟ್ಮೆಂಟ್ ಕಟ್ಟಡ, ಉದ್ಯಮ ಸೇರಿದಂತೆ 12,000ಕ್ಕೂ ಹೆಚ್ಚು ಕಟ್ಟಡಗಳು, ಹಲವು ಕಾರುಗಳು ಸುಟ್ಟು ಕರಕಲಾಗಿದ್ದು, ಈ ಭೀಕರ ಕಾಳ್ಗಿಚ್ಚಿಗೆ ಕಾರಣವನ್ನು ಯಾರು ಕೂಡ ಪತ್ತೆ ಮಾಡಿಲ್ಲ.
![la-fires-families-in-shock-begin-to-visit-their-charred-homes-in-the-area](https://etvbharatimages.akamaized.net/etvbharat/prod-images/11-01-2025/23301599_assas.jpg)
ನಾಯಕತ್ವದ ವೈಫಲ್ಯದ ಕುರಿತು ಆರೋಪ ಕೇಳಿ ಬಂದಿದ್ದು, ರಾಜಕೀಯ ಟೀಕೆಗಳಿಗೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಸಾಗಿದೆ. ಗವರ್ನರ್ ಗವಿನ್ ನ್ಯೂಸಮ್ ಶುಕ್ರವಾರ, ದೀರ್ಘ ತೊಂದರೆಗೆ ಕಾರಣವಾಗುತ್ತಿರುವ ಈ ಕಾಳ್ಗಿಚ್ಚನ್ನು ನಂದಿಸಲು ಸುಮಾರು 117 ಮಿಲಿಯನ್ ಗ್ಯಾಲನ್ ನೀರನ್ನು ಅಣೆಕಟ್ಟುಗಳಿಂದ ಬಳಸುವಂತೆ ಆದೇಶಿಸಿದ್ದಾರೆ.
ಈ ನಡುವೆ ಲಾಸ್ ಏಜಂಲೀಸ್ ಅಗ್ನಿ ಶಾಮಕದಳದ ಮುಖ್ಯಸ್ಥ ಕ್ರಿಸ್ಟಿನ ಕ್ರೌಲಿ, ಅಗ್ನಿಶಾಮಕದಳದ ಸಿಬ್ಬಂದಿಗೆ ಸಾಕಷ್ಟು ಹಣ ನೀಡಿಲ್ಲ ಎಂದು ಆರೋಪಿಸಿದ್ದು, ನೀರಿನ ಬಿಕ್ಕಟ್ಟಿನ ಕುರಿತು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾಳ್ಗಿಚ್ಚಿಗೆ ಪಾಲಿಸಡೇಸ್ನಲ್ಲಿ 11 ಜನರು ಸಾವನ್ನಪ್ಪಿದ್ದು, ಈಟೊನ್ ಫೈರ್ನಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಎಲ್ಎ ಕಂಟ್ರಿ ಮೆಡಿಕಲ್ ಪರೀಕ್ಷಕ ಅಧಿಕಾರಿ ತಿಳಿಸಿದ್ದಾರೆ. ಈ ನಡುವೆ ಕಣ್ಮರೆಯಾಗಿರುವವರ ಕುರಿತು ವರದಿ ನೀಡುವಂತೆ ತಿಳಿಸಲಾಗಿದ್ದು, ಇನ್ನೂ 10 ಸಾವಿರ ಮಂದಿ ಸ್ಥಳಾಂತರವಾಗಬೇಕಿದೆ.
ಈ ದುರಂತವೂ ಹೋಟೆಲ್ ವೈಟರ್ರಿಂದ ಸಿನಿಮಾ ತಾರೆಯರವರೆಗೆ ಪ್ರತಿಯೊಬ್ಬರ ಮನೆಯನ್ನು ಕಿತ್ತುಕೊಂಡಿದ್ದು, ಸರ್ಕಾರ ಇದರ ಹಾನಿಯನ್ನು ಇನ್ನು ಅಂದಾಜಿಸಬೇಕಿದೆ. ಖಾಸಗಿ ಘಟಕಗಳು ಅಂದಾಜಿಸಿದಂತೆ 10 ಬಿಲಿಯನ್ ಡಾಲರ್ ನಷ್ಟವಾಗಿದೆ. ಈ ನಡುವೆ, ವಾಲ್ಟ್ ಡಿಸ್ನಿ ಕಾಳ್ಗಿಚ್ಚಿನ ಸಂತ್ರಸ್ತರಿಗೆ 15 ಮಿಲಿಯನ್ ಡಾಲರ್ ನೆರವು ನೀಡಿದ್ದು, ಪುನರ್ ನಿರ್ಮಾಣದಲ್ಲಿ ಸಹಾಯ ಮಾಡುವುದಾಗಿ ತಿಳಿಸಿದೆ.
ಶಾಲೆಗಳು, ಚರ್ಚ್‌ಗಳು, ಲೈಬ್ರರಿಗಳು, ಬೂಟೀಕ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು, ಬ್ಯಾಂಕ್‌ಗಳು, ಇಲ್ಲಿನ ಇತಿಹಾಸ ಸಾರುತ್ತಿದ್ದ ಸ್ಥಳೀಯ ಗುರುತುಗಳು ಬೆಂಕಿಗೆ ಆಹುತಿಯಾಗಿದೆ.
ಇದನ್ನೂ ಓದಿ: ಲಾಸ್ ಏಂಜಲೀಸ್ನಲ್ಲಿ ಭೀಕರ ಕಾಡ್ಗಿಚ್ಚು; ಹಾಲಿವುಡ್ ಹಿಲ್ಸ್‌ನಲ್ಲಿ ಸೆಲಿಬ್ರಿಟಿಗಳ ಮನೆಗಳು ಸುಟ್ಟು ಭಸ್ಮ