ವಾಷಿಂಗ್ಟನ್(ಅಮೆರಿಕ):ದೇಶದ ಇತಿಹಾಸದಲ್ಲಿ ಜೋ ಬೈಡನ್ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದರು. ಜೋ ಬೈಡನ್ ಅವರು ಚುನಾವಣೆಯಿಂದ ಹಿಂದೆ ಸರಿದ ನಂತರ ಪ್ರತಿಕ್ರಿಯಿಸಿದ ಅವರು, ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಅಭ್ಯರ್ಥಿಯಾದರೆ ಅವರನ್ನು ಸುಲಭವಾಗಿ ಸೋಲಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಜೋ ಬೈಡನ್ ಸೂಕ್ತ ವ್ಯಕ್ತಿಯಲ್ಲ. ದೇಶ ಸೇವೆ ಮಾಡಲು ಅವರು ಎಂದಿಗೂ ಅರ್ಹರಾಗಿರಲಿಲ್ಲ. ಸುಳ್ಳು ಮತ್ತು ಅಪಪ್ರಚಾರದಿಂದಲೇ ಆ ಸ್ಥಾನ ಪಡೆದರು. ಈ ಸಂಗತಿ ಎಲ್ಲರಿಗೂ ತಿಳಿದಿದೆ. ಅವರ ಆಡಳಿತದಿಂದಾಗಿ ನಾವು ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಿದ್ದು, ಆದಷ್ಟು ಬೇಗ ಅವುಗಳನ್ನು ಸರಿಪಡಿಸೋಣ ಎಂದು ಟ್ರಂಪ್ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಬೈಡನ್ ಬೆಂಬಲಿಸಿದ್ದಾರೆ. ಇನ್ನು ಟ್ರಂಪ್ ಪುತ್ರ, ಡೊನಾಲ್ಡ್ ಟ್ರಂಪ್ ಜೂನಿಯರ್ ಕೂಡಾ ಕಮಲಾ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಕಮಲಾ ಹ್ಯಾರಿಸ್ ಬೈಡನ್‌ಗಿಂತಲೂ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ವಹಿಸಲಾದ ಗಡಿ ಸಮಸ್ಯೆಯನ್ನೇ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಬೈಡನ್ ಉಮೇದುವಾರಿಕೆಗೆ ಇತ್ತೀಚೆಗೆ ಸ್ವಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಟ್ರಂಪ್ ಅವರೊಂದಿಗಿನ ಚರ್ಚೆಯಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು. ಇದಾದ ನಂತರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಭಾನುವಾರ, ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ಅಧ್ಯಕ್ಷೀಯ ಚುನಾವಣಾ ಕಣ ತೊರೆಯುವುದಾಗಿ ಬೈಡನ್ ಘೋಷಿಸಿದ್ದಾರೆ.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ಕಮಲಾ ಹ್ಯಾರಿಸ್: ಯಾರಿವರು? - Kamala Harris