2024 ಕೊನೆಗೊಳ್ಳುತ್ತಿದ್ದು, ಇಡೀ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಪ್ರೀತಿ ಮತ್ತು ನವಾರಂಭಗಳಿಂದ ಗುರುತಿಸಲ್ಪಟ್ಟ ವರ್ಷವನ್ನು ಸಂಭ್ರಮಿಸುವ ಕ್ಷಣ. ಬಾಕ್ಸ್ ಆಫೀಸ್ ಸಕ್ಸಸ್ ಮತ್ತು ವೃತ್ತಿಜೀವನದ ಮೈಲಿಗಲ್ಲಿಂದಾಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿರುವ ಹಲವು ಸೆಲೆಬ್ರಿಟಿಗಳಿಗೆ ಈ ವರ್ಷ ವಿಶೇಷ ಅಂತಲೇ ಹೇಳಬಹುದು. ಅದ್ಧೂರಿ ಮದುವೆಯಿಂದ ಹಿಡಿದು ಆತ್ಮೀಯ ಸಮಾರಂಭಗಳವರೆಗೆ, ಈ ವರ್ಷ ಸಖತ್ ಸದ್ದು ಮಾಡಿದ ಸೆಲೆಬ್ರಿಟಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.
ತರುಣ್ ಸುಧೀರ್-ಸೋನಾಲ್ ಮೊಂತೆರೋ: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ಖ್ಯಾತ ನಟಿ ಸೋನಾಲ್ ಮೊಂತೆರೋ ಆಗಸ್ಟ್ 11ರಂದು ಹಸೆಮಣೆಯೇರಿದರು. ಇದಾದ ಕೆಲವೇ ದಿನಗಳ ನಂತರ ಕ್ರಿಶ್ಚಿಯನ್ ಸಂಪ್ರದಾಯದಲ್ಲೂ ಮದುವೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. 2021ರ ಮಾರ್ಚ್ 11ರಂದು ತೆರೆಕಂಡ ರಾಬರ್ಟ್ ಚಿತ್ರದಲ್ಲಿ ಸೋನಾಲ್ ಕಾಣಿಸಿಕೊಂಡಿದ್ದರು. ತರುಣ್ ಸುಧೀರ್ ನಿರ್ದೇಶನದಲ್ಲಿ ಬಂದ ಸಿನಿಮಾ ಯಶಸ್ವಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಖುಷಿ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ.
ನಾಗಭೂಷಣ್-ಪೂಜಾ:ಹಲವು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಮತ್ತು ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಚಂದನವನದಲ್ಲಿ ಗುರುತಿಸಿಕೊಂಡಿರುವ ನಾಗಭೂಷಣ್ ಅವರು ತಮ್ಮ ಬಹುಕಾಲದ ಗೆಳತಿ ಪೂಜಾ ಅವರನ್ನು ಜನವರಿಯಲ್ಲಿ ಮದುವೆಯಾದರು. ಡಾಲಿ ಸ್ನೇಹಿತ ನಾಗಭೂಷಣ್ ಟಗರು ಪಲ್ಯ ಸಿನಿಮಾ ಮೂಲಕ ನಾಯಕನಟನಾಗಿಯೂ ಹೊರಹೊಮ್ಮಿದ್ದಾರೆ.
ಡಾಲಿ ಧನಂಜಯ್ ಮದುವೆ ಘೋಷಣೆ: ನಟರಾಕ್ಷಸ ಡಾಲಿ ಧನಂಜಯ್ 2025ರ ಆರಂಭದಲ್ಲಿ ಹಸೆಮಣೆ ಏರುತ್ತಿದ್ದಾರೆ. ದೀಪಾವಳಿ ಹಬ್ಬದಂದು ಈ ಶುಭ ಸುದ್ದಿ ಹಂಚಿಕೊಂಡಿದ್ದರು. ಬಹುಕಾಲದ ಗೆಳತಿ ಗೈನಕಾಲಜಿಸ್ಟ್ ಆಗಿರುವ ಧನ್ಯತಾ ಅವರನ್ನು 2025ರ ಫೆಬ್ರವರಿಗೆ ಡಾಲಿ ವರಿಸಲಿದ್ದಾರೆ.
ಪುಲ್ಕಿತ್ ಸಾಮ್ರಾಟ್ ಕೃತಿ ಕರಬಂದ: ಮಾರ್ಚ್ನಲ್ಲಿ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಮತ್ತು ಗೂಗ್ಲಿ ಬೆಡಗಿ ಕೃತಿ ಕರಬಂದ ದಾಂಪತ್ಯ ಜೀವನ ಆರಂಭಿಸಿದರು. ಐದು ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ದೆಹಲಿಯಲ್ಲಿ ಸಪ್ತಪದಿ ತುಳಿದರು. ಅವರ ವಿವಾಹದ ಕ್ಷಣಗಳು ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡಿತ್ತು.
ನಾಗ ಚೈತನ್ಯ-ಶೋಭಿತಾ ಧೂಳಿಪಾಲ: ದಕ್ಷಿಣ ಭಾರತ ಚಿತ್ರರಂಗದ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಡಿಸೆಂಬರ್ 4ರಂದು ಹಾರ ಬದಲಾಯಿಸಿಕೊಂಡರು. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ವಿವಾಹವು ಹೆಚ್ಚಿನವರ ಗಮನ ಸೆಳೆಯಿತು. ಸಾಂಪ್ರದಾಯಿಕ ಲುಂಗಿ ಕುರ್ತಾ ಔಟ್ಫಿಟ್ನಲ್ಲಿ ನಾಗ ಚೈತನ್ಯ ಕಾಣಿಸಿಕೊಂಡಿದ್ದರೆ, ಶೋಭಿತಾ ಅವರ ಅಲೌಕಿಕ ವಧುವಿನ ನೋಟ ನೆಟ್ಟಿಗರ ಮನ ಗೆದ್ದಿತ್ತು.
ಕೀರ್ತಿ ಸುರೇಶ್-ಆಂಟೋನಿ ಥಟ್ಟಿಲ್:ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ ಜೋಡಿಯ ಮದುವೆ ನಡೆದಿದೆ. 15 ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಡಿಸೆಂಬರ್ 12ರಂದು ಗೋವಾದಲ್ಲಿ ನಡೆದ ಖಾಸಗಿ ಈವೆಂಟ್ನಲ್ಲಿ ಒಂದಾದರು. ದಕ್ಷಿಣ ಭಾರತದ ಶೈಲಿಯ ವಿವಾಹ ಕಾರ್ಯಕ್ರಮ ನಡೆಯಿತು. ಮರುದಿನ ಅದೇ ಸ್ಥಳದಲ್ಲಿ ಕ್ರಿಶ್ಚಿಯನ್ ಶೈಲಿಯ ಸಮಾರಂಭವನ್ನೂ ಆಯೋಜಿಸಿದ್ದರು.
ಇರಾ ಖಾನ್-ನೂಪುರ್ ಶಿಖರೆ:ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಬಹುಕಾಲದ ಗೆಳೆಯ, ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ಮದುವೆಯಾದರು. ರಿಜಿಸ್ಟರ್ ನಂತರ ಜನವರಿ 10ರಂದು ಉದಯಪುರದಲ್ಲಿ ಡ್ರೀಮಿ ಡೆಸ್ಟಿನೇಶನ್ ವೆಡ್ಡಿಂಗ್ ಇಟ್ಟುಕೊಂಡಿದ್ದರು. ಮುಂಬೈನಲ್ಲಿ ಆರತಕ್ಷತೆ ನಡೆಯಿತು. ಮದುವೆ ಪ್ರಮಾಣಪತ್ರಕ್ಕೆ ಸಹಿ ಹಾಕಲು ನೂಪುರ್ ಜಾಗಿಂಗ್ ಮಾಡುತ್ತಾ ಬಂದ ಕ್ಷಣ ಆನ್ಲೈನ್ನಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ:ಪ್ರೀತಿಗೆ ಸಂಕೇತದಂತಿರುವ ಫೆಬ್ರವರಿ ತಿಂಗಳಲ್ಲಿ ಬಾಲಿವುಡ್ ತಾರೆಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ದಾಂಪತ್ಯ ಜೀವನ ಆರಂಭಿಸಿದರು. ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆಯೇರಿದರು. ಹಲವು ವರ್ಷಗಳ ಡೇಟಿಂಗ್ ನಂತರ, ಪ್ರೇಮಪಕ್ಷಿಗಳು ತಮ್ಮ ಮದುವೆಗೆ ಬೀಚ್ಸೈಡ್ ಲೊಕೇಶನ್ನನ್ನು ಆಯ್ದುಕೊಂಡರು. ಸಮಾರಂಭಕ್ಕೆ ಕುಟುಂಬ, ಸ್ನೇಹಿತರು ಮತ್ತು ಇಂಡಸ್ಟ್ರಿ ಗೆಳೆಯರು ಸಾಕ್ಷಿಯಾಗಿದ್ದರು.