ಅಸಂಖ್ಯಾತ ಹಿಟ್ ಸಾಂಗ್ಗಳಿಂದಾಗಿ ಹೆಸರುವಾಸಿಯಾಗಿರುವ ಗಾಯಕ ಅರ್ಮಾನ್ ಮಲಿಕ್ ಅವರು ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ತಮ್ಮ ಅದ್ಭುತ ಕಂಠಸಿರಿಯ ಮೂಲಕ ಜನಮನ ಗೆದ್ದಿರುವ ಪ್ರಸಿದ್ಧ ಗಾಯಕ ಸುಂದರ ಮತ್ತು ಆತ್ಮೀಯ ಸಮಾರಂಭದಲ್ಲಿ ಗೆಳತಿಯ ಕೈ ಹಿಡಿದಿದ್ದಾರೆ. 6 ವರ್ಷಗಳ ಡೇಟಿಂಗ್ ನಂತರ 2023ರ ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮಪಕ್ಷಿಗಳು ಇದೀಗ ದಾಂಪತ್ಯ ಜೀವನ ಆರಂಭಿಸಿದ್ದು, ಅತಿಸುಂದರ ಎನ್ನುವಂತಹ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪುಷ್ಪಾಲಂಕಾರದಿಂದ ಸುತ್ತುವರೆದಿರುವ ಹೊರಾಂಗಣದಲ್ಲಿ ಮದುವೆ ನಡೆದಿದೆ. ಫೋಟೋಗಳನ್ನು ನೋಡಿದ್ರೆ ರೊಮ್ಯಾಂಟಿಕ್ ಆ್ಯಂಡ್ ಬ್ಯೂಟಿಫುಲ್ ಎನ್ನುವಂತಿದೆ. ಇದೊಂದು ಖಾಸಗಿ ಕಾರ್ಯಕ್ರಮದಂತೆ ತೋರಿದೆ. ವರ ಸಾಫ್ಟ್ ಪಿಂಕ್ ಶೇರ್ವಾನಿ ಧರಿಸಿದ್ರೆ, ವಧು ಪಿಂಕ್ ದುಪಟ್ಟಾದೊಂದಿಗೆ ಸೊಗಸಾದ ಆರೆಂಜ್ ಕಲರ್ ಲೆಹೆಂಗಾ ಧರಿಸಿ ಬೆರಗುಗೊಳಿಸಿಸುವ ನೋಟ ಬೀರಿದ್ದಾರೆ. ಇಬ್ಬರೂ ತಮ್ಮ ವಿಶೇಷ ದಿನದ ನೋಟವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸರಣಿ ಫೋಟೋಗಳನ್ನು ಹಂಚಿಕೊಂಡ ಜನಪ್ರಿಯ ಗಾಯಕ "ತು ಹಿ ಮೇರಾ ಘರ್" (ನೀನೇ ನನ್ನ ಮನೆ) ಎಂದು ಬರೆದುಕೊಂಡಿದ್ದಾರೆ.
ಅರ್ಮಾನ್ ಆಶ್ನಾ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತ ಸ್ನೇಹಿತರು ಸಾಕ್ಷಿಯಾಗಿದ್ದರು. ಜೊತೆಗೆ ಮನರಂಜನಾ ಕ್ಷೇತ್ರದ ಕೆಲ ಪ್ರಸಿದ್ಧ ವ್ಯಕ್ತಿಗಳು ಹಾಜರಿದ್ದರು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ಮಾರ್ಡನ್ ಎಲಿಮೆಂಟ್ಸ್ ಈ ಈವೆಂಟ್ನಲ್ಲಿತ್ತು. ಸೂರ್ಯನ ಕಿರಣಗಳ ಕೆಳಗೆ ಹಾರ ಬದಲಾಯಿಸಿಕೊಂಡಿದ್ದು, ಫೋಟೋಗಳು ಅದ್ಭುತವಾಗಿ ಮೂಡಿಬಂದಿವೆ. ಕೈ ಕೈ ಹಿಡಿದು, ನಗುತ್ತಾ, ಪ್ರೀತಿಪಾತ್ರರ ಜೊತೆ ಸಂಭ್ರಮಿಸಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ಧನರಾಜ್ ಕೂಡುಕುಟುಂಬದ 30 ಮಂದಿ; ಕರಾವಳಿಯ ಪಿಲಿನಲಿಕೆ ಜೋರು
ಅರ್ಮಾನ್ ಆಶ್ನಾ ಜೋಡಿಯ ಸಂಬಂಧ ಅವರ ಅಭಿಮಾನಿ ಬಳಗದಲ್ಲಿ ಮೆಚ್ಚುಗೆ ಸಂಪಾದಿಸಿದೆ. ನವ ದಂಪತಿ ತಮ್ಮ ವಿವಾಹವನ್ನು ಘೋಷಿಸಿದ ಕೂಡಲೇ, ಕಾಮೆಂಟ್ ಸೆಕ್ಷನ್ ಅಭಿನಂದನಾ ಸಂದೇಶಗಳಿಂದ ತುಂಬಿತು. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಸಹುದ್ಯೋಗಿಗಳು ಶುಭ ಹಾರೈಸುತ್ತಿದ್ದಾರೆ
ಒಂದು ಮಳೆ ಬಿಲ್ಲು, ಸರಿಯಾಗಿ ನೆನಪಿದೆ ನನಗೆ, ನಾ ಹೇಗೆ ಹೇಳಲಿ, ನಿನ್ನ ರಾಜಾ ನಾನು, ಒಂದೇ ಏಟಿಗೆ, ಅನುಮಾನವೇ ಇಲ್ಲ, ಪ್ರೇಮಬರಹ, ನೀನೆ ಎಲ್ಲ ಬೇರೇನಿಲ್ಲ ಹೀಗೆ ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ.
ಇದನ್ನೂ ಓದಿ: 'ಪಿನಾಕ'ದಲ್ಲಿ ಗೋಲ್ಡನ್ ಸ್ಟಾರ್: ಇದು ಯಾರೋ ಹೆಣೆದ ಕಟ್ಟುಕಥೆಯಲ್ಲ, ಜನರಿಗಾಗಿ ಬದುಕಿದ ವೀರನ ದಂತಕಥೆ!
ಇವರು ಬಾಲಿವುಡ್ನ ಖ್ಯಾತ ಸಂಗೀತ ಸಂಯೋಜಕ ಅನು ಮಲಿಕ್ ಅವರ ಅಳಿಯ. ಅರ್ಮಾನ್ ಸಹೋದರ ಅಮಲ್ ಮಲಿಕ್ ಕೂಡಾ ಗಾಯಕ. ಬಾಲಿವುಡ್ ಮಾತ್ರವಲ್ಲದೇ ಕನ್ನಡ ಸೇರಿ ಬಹುಭಾಷೆಗಳಲ್ಲಿ ಸುಮಧುರ ಸಂಗೀತದ ಮೂಲಕ ಕೋಟ್ಯಂತರ ಸಂಗೀತಪ್ರಿಯರ ಮನ ಗೆದ್ದಿದ್ದಾರೆ. ಇನ್ನು, ಆಶ್ನಾ ಶ್ರಾಫ್ ಸೋಶಿಯಲ್ ಮೀಡಿಯಾ ಇನ್ಲ್ಫುಯೆನ್ಸರ್, ಬ್ಲಾಗರ್, ಮಾಡೆಲ್.