ಜಾಲ್ನಾ (ಮಹಾರಾಷ್ಟ್ರ); ಮನೆಯವರ ವಿರೋಧದ ನಡುವೆ ಅಂತಧರ್ಮಿಯ ಮದುವೆ ಆಗಿದ್ದ ಮಹಿಳೆಯೊಬ್ಬರನ್ನು ಗೃಹಬಂಧನಲ್ಲಿಟ್ಟಿದ್ದ ಪ್ರಕರಣ ಜಾಲ್ನಾ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಆಕೆಯ ಪೋಷಕರೇ ಮನೆಯಲ್ಲಿ ಸರಪಳಿಯಿಂದ ಕಟ್ಟಿಹಾಕಿರುವ ಆರೋಪ ಕೇಳಿಬಂದಿದ್ದು, ಗೃಹಿಣಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕೋರ್ಟ್ ಆದೇಶ ಹಿನ್ನೆಲೆ ಮಹಿಳೆಯ ರಕ್ಷಣೆ; ಶಹನಾಜ್ ಅಲಿಯಾಸ್ ಸೋನಲ್ ಗೃಹಬಂಧನದಿಂದ ರಕ್ಷಿಸಲ್ಪಟ್ಟಿರುವ ಮಹಿಳೆ. ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠದ ಆದೇಶ ಮೇರೆಗೆ ಪೊಲೀಸರು ಗ್ರಾಮಕ್ಕೆ ತೆರಳಿ ಮಹಿಳೆಯನ್ನು ಗೃಹಬಂಧನದಿಂದ ಮುಕ್ತಗೊಳಿಸಿದ್ದಾರೆ.
ಭೋಕಾರ್ದನ್ ತಹಶಿಲ್ ವ್ಯಾಪ್ತಿಯ ಅಲಾಪುರ ಗ್ರಾಮದಲ್ಲಿರುವ ಪೋಷಕರ ಮನೆಯಲ್ಲಿ ಮಹಿಳೆಯನ್ನು ಸರಪಳಿಯಿಂದ ಕಳೆದ ಎರಡು ತಿಂಗಳಿಂದ ಕಟ್ಟಿಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಪೊಲೀಸರ ನೀಡಿರುವ ಮಾಹಿತಿ ಪ್ರಕಾರ, 20 ಹರೆಯದ ಮಹಿಳೆ ಅಂತಧರ್ಮಿಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಈ ದಂಪತಿಗೆ ಮೂರು ವರ್ಷದ ಮಗನಿದ್ದಾನೆ. ಎರಡು ತಿಂಗಳ ಹಿಂದೆ ತನ್ನ ತವರು ಮನೆಗೆ ತೆರಳಿದ್ದ ಸೋನಲ್ ಅವರನ್ನು ಆಕೆಯ ಕುಟುಂಬಸ್ಥರು ಗೃಹಬಂಧನಲ್ಲಿರಿಸಿದ್ದರು. ಮಹಿಳೆ ಮತ್ತೆ ಗಂಡನ ಮನೆಗೆ ಹೋಗದಂತೆ ತಡೆಯಲು ಅವರು ಈ ರೀತಿ ಗೃಹಬಂಧನದಲ್ಲಿರಿಸಿದ್ದರು.
ಪತಿ ಒತ್ತಾಯಕ್ಕೆ ಮಣಿಯದ ಕುಟುಂಬಸ್ಥರು ; ಸೋನಲ್ ಅವರ ಪತಿ ಹಲವು ಬಾರಿ ಅಲಾಪುರ ಗ್ರಾಮಕ್ಕೆ ತೆರಳಿ ತನ್ನ ಪತ್ನಿಯನ್ನು ಕಳಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸಹ ಇದಕ್ಕೆ ಅತ್ತೆ ಮನೆಯವರು ಸೊಪ್ಪು ಹಾಕಿರಲಿಲ್ಲ. ಅಲ್ಲದೆ, ಮನೆಯೊಳಗೆ ಬರದಂತೆ ಆತನಿಗೆ ನಿರಾಕರಿಸಿದ್ದರು. ತಮ್ಮ ಮಗಳನ್ನು ಏಕಾಂತ ಸ್ಥಳದಲ್ಲಿರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೈಕೋರ್ಟ್ ಮೊರೆಹೋಗಿದ್ದ ಪತಿ : ಇದರಿಂದ ಬೇಸತ್ತ ಮಹಿಳೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ಆದೇಶ ಪಡೆದು ಪೊಲೀಸರ ನೆರವಿನಿಂದ ಮತ್ತು ಸರ್ಕಾರಿ ವಕೀಲರ ಸಹಾಯದಿಂದ ತನ್ನ ಪತ್ನಿ ಮತ್ತು ಮಗುವನ್ನು ಗೃಹಬಂಧನದಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ದೂರು ನೀಡಿದ್ರೆ ಪ್ರಕರಣ ದಾಖಲು : ಗೃಹಬಂಧನದ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ ನೊಂದ ಮಹಿಳೆ ದೂರು ನೀಡಿದ್ರೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ಪತ್ನಿಗೆ ಕಿರುಕುಳ ಆರೋಪ: ಕಾನ್ಸ್‌ಟೇಬಲ್ ವಿರುದ್ಧ ಎಫ್ಐಆರ್