ಕ್ರಿಕೆಟ್ನಲ್ಲಿ ಆಟಗಾರರಿಂದ ಆಗಾಗ ಮಿಸ್‌ಫೀಲ್ಡ್ ಆಗುವುದು ಸಹಜ. ಇಲ್ಲೊಬ್ಬ ಆಟಗಾರ ಅದ್ಭುತ ಫೀಲ್ಡ್ ಮಾಡಿ ಬೌಂಡರಿ ಕಡೆಗೆ ಧಾವಿಸುತ್ತಿದ್ದ ಚೆಂಡನ್ನು ತಡೆದರೂ ಪ್ರಯತ್ನ ವ್ಯರ್ಥವಾಯಿತು. ಬೌಲರ್ ಮಾಡಿದ ತಪ್ಪಿನಿಂದಾಗಿ ಎದುರಾಳಿ ತಂಡಕ್ಕೆ 4ರ ಬದಲು 6ರನ್ ದಕ್ಕಿತು.
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್(ISPL)ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಬ್ಯಾಟಿಂಗ್ ತಂಡದ ಆಟಗಾರ ಚೆಂಡನ್ನು ಬೌಂಡರಿಯತ್ತ ಬಾರಿಸಿದರು. ಫೀಲ್ಡರ್ ಓಡಿ ಹೋಗಿ ಚೆಂಡು ಬೌಂಡರಿ ಗಡಿ ದಾಟದಂತೆ ತಡೆದರು. ಬ್ಯಾಟಿಂಗ್ ತಂಡದ ಆಟಗಾರರು 1 ರನ್ ಗಳಿಸಿ ಮತ್ತೊಂದು ರನ್ಗಾಗಿ ಕ್ರೀಸ್ಬಿಟ್ಟಿದ್ದರು. ಬೌಂಡರಿ ತಡೆದಿದ್ದ ಫೀಲ್ಡರ್ ರನೌಟ್ ಮಾಡಲು ಚೆಂಡನ್ನು ವಿಕೆಟ್ ಕಡೆಗೆ ಎಸೆದಿದ್ದರು. ಈ ವೇಳೆ ಮತ್ತೊಬ್ಬ ಫೀಲ್ಡರ್ ಚೆಂಡು ಹಿಡಿದು ಬಲವಾಗಿ ವಿಕೆಟ್ ಕಡೆ ಎಸೆದರು. ಆದರೆ ಚೆಂಡು ವಿಕೆಟ್ ಮಿಸ್ ಆಗಿ ಬೌಂಡರಿಗೆ ಹೋಯಿತು. ಓವರ್ ಥ್ರೋದಿಂದಾಗಿ ಬ್ಯಾಟಿಂಗ್ ತಂಡಕ್ಕೆ 2 ಪ್ಲಸ್ 4 ರನ್ ಸೇರಿ ಒಟ್ಟು 6 ರನ್ ದೊರೆಯಿತು. ಇದರ ವಿಡಿಯೋ ವೈರಲ್ ಆಗಿದೆ.
Saved a boundary but ended up conceding a SIX!!!!!! 🤣
— Sameer Allana (@HitmanCricket) February 3, 2025
CRICKET BELIEVE IT OR NOT 🤯 pic.twitter.com/i9mIvRBqfy
"ಸುಮ್ಮನೆ ಬೌಂಡರಿ ಬಿಟ್ಟಿದ್ದರೂ 2 ರನ್ ಉಳಿಯುತ್ತಿತ್ತು" ಎಂದು ಓರ್ವ ಕ್ರಿಕೆಟ್ ಪ್ರೇಮಿ ಕಾಮೆಂಟ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ನೋಬಾಲ್, ವೈಡ್ ಇಲ್ಲದೇ 1 ಎಸೆತದಲ್ಲಿ 7 ರನ್ ಗಳಿಸಿದ ನಿದರ್ಶನಗಳಿವೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಪಾಕ್ ಬ್ಯಾಟರ್ ಮಜಿದ್ ಖಾನ್ ಒಂದೇ ಎಸೆತದಲ್ಲಿ ನೋಬಾಲ್, ವೈಡ್, ಬೌಂಡರಿಗಳ ಸಹಾಯವಿಲ್ಲದೆ 7ರನ್ ಕಲೆ ಹಾಕಿದ್ದರು. ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲೆ ಬೌಲಿಂಗ್ ಮಾಡಿದ್ದ ವೇಳೆ ಮಜಿದ್ ಚೆಂಡನ್ನು ಡೀಪ್ ಪಾಯಿಂಟ್ನತ್ತ ಬಾರಿಸಿದ್ದರು. ಬಳಿಕ ಮಜಿದ್ 3 ರನ್ ಸೇರಿಸಿ 4ನೇ ರನ್ ಕದಿಯಲು ಕ್ರೀಸ್ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಆಸೀಸ್ ಫೀಲ್ಡರ್ ಚೆಂಡನ್ನು ಹಿಡಿದು ಕೀಪರ್ ಕಡೆ ಎಸೆದಿದ್ದರು. ಆದರೆ ಕೀಪರ್ ಚೆಂಡನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪಾಕ್ ಕ್ರಿಕೆಟಿಗರು ಮತ್ತೆ 3 ರನ್ ಗಳಿಸಿದರು. ಹೀಗಾಗಿ, ಓವರ್ ಥ್ರೋದಿಂದಾಗಿ ಯಾವುದೇ ಬೌಂಡರಿ ಇಲ್ಲದೆಯೇ 7 ರನ್ ಸಿಕ್ಕಿತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್; ಸತ್ಯ ಬಿಚ್ಚಿಟ್ಟ ಸಾಂಗ್ವಾನ್!