ನವದೆಹಲಿ: ವಿಮಾನಗಳಿಗೆ ಹೆಚ್ಚುತ್ತಿರುವ ಬೆದರಿಕೆ ಕರೆಗಳ ಕುರಿತು ರಾಜ್ಯ ಸಭೆಯಲ್ಲಿ ಮಾಹಿತಿ ಹಂಚಿಕೊಂಡ ನಾಗರಿಕ ವಿಮಾನಯಾನ ಸಚಿವರು, 2024ರಲ್ಲಿ ಒಟ್ಟಾರೆ 728 ಹುಸಿ ಬಾಂಬ್ ಕರೆಗಳು ಬಂದಿದ್ದು, ಈ ಪ್ರಕರಣಗಳಲ್ಲಿ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
2024ರಲ್ಲಿ ಒಟ್ಟು 728 ಹುಸಿ ಬಾಂಬ್ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ. ಆ ಪೈಕಿ ಅತಿ ಹೆಚ್ಚು ಬೆದರಿಕೆ ಕರೆ ಬಂದಿರುವುದು ಇಂಡಿಗೋ ವಿಮಾನ ಸಂಸ್ಥೆಗೆ ಎಂದು ವಿವರ ನೀಡಿದರು.
ಇಂಡಿಗೋ ವಿಮಾನಯಾನ ಸಂಸ್ಥೆಗೆ 216, ಏರ್ ಇಂಡಿಯಾಗೆ 719, ವಿಸ್ತಾರಾಗೆ 153, ಆಕಾಸಾ ಏರ್‌ಗೆ 72, ಸ್ಪೈಸ್ಜೆಟ್ಗೆ 35, ಅಲೆಯನ್ಸ್ ಏರ್‌ಗೆ 26 ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ 19, ಸ್ಟಾರ್ ಏರ್‌ಗೆ 14 ಬೆದರಿಕೆ ಕರೆ ಬಂದಿವೆ.
ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳಲ್ಲಿ ಎಮಿರೇಟ್ಸ್‌ಗೆ 5, ಏರ್ ಅರೇಬಿಯಾಕ್ಕೆ 3, ಮತ್ತು ಏರೋಫ್ಲಾಟ್, ಏರ್ ಕೆನಡಾ, ಕ್ಯಾಥೆ ಪೆಸಿಫಿಕ್, ಎತಿಹಾದ್, ನೋಕ್ ಏರ್ ಮತ್ತು ಥಾಯ್ ಲಯನ್ ಏರ್‌ಗೆ ತಲಾ ಒಂದು ಬೆದರಿಕೆ ಬಂದಿದೆ ಎಂದು ತಿಳಿಸಿದರು.
ಇಂತಹ ಬೆದರಿಕೆಗಳನ್ನು ನಿಭಾಯಿಸಲು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಬಾಂಬ್ ಬೆದರಿಕೆ ಆಕಸ್ಮಿಕ ಯೋಜನೆಯನ್ನು (ಬಿಟಿಸಿಪಿ) ಜಾರಿಗೆ ತರಲಾಗಿದೆ. ಈ ರೀತಿಯ ಘಟನೆಯನ್ನು ಬೇಗ ವಿಶ್ಲೇಷಿಸಿ, ಪರಿಹರಿಸಲು ಪ್ರತಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (ಬಿಟಿಎಸಿ) ಜಾರಿಗೊಳಿಸುವ ಮೂಲಕ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದು ಸಚಿವರು ಹೇಳಿದರು.
ಬಿಸಿಎಎಸ್ನ ದತ್ತಾಂಶ ಪ್ರಕಾರ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, 2024ರಲ್ಲಿ 728 ಹುಸಿ ಬಾಂಬ್ ಬೆದರಿಕೆಗಳನ್ನು ವಿವಿಧ ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿವೆ. ನಕಲಿ ಬಾಂಬ್ ಕರೆ ಸಂಬಂಧ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸದಸ್ಯೆ ಪರಿಮಳಾ ನಾಥ್ವಾನಿ ಅವರ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು.
ಬಿಸಿಎಎಸ್ ಸುವ್ಯವಸ್ಥಿತ ಭದ್ರತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ವೈಮಾನಿಕ ಸೇವೆಯಲ್ಲಿ ಯಾವುದೇ ಕಾನೂನುಬಾಹಿರ ಹಸ್ತಕ್ಷೇಪವನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆಗಳನ್ನು ನೀಡಿದೆ ಎಂದು ತಿಳಿಸಿದರು.
ಪ್ರತ್ಯೇಕ ಲಿಖಿತ ಉತ್ತರದಲ್ಲಿ, ಹಿತಾಸಕ್ತಿ ರಕ್ಷಣೆಯ ಉದ್ದೇಶದಿಂದ ಸರ್ಕಾರ ಕೇಪ್ ಟೌನ್ ಒಪ್ಪಂದದೊಂದಿಗೆ ಭಾರತವನ್ನು ಜೋಡಿಸುವ ಗುರಿಯನ್ನು ಹೊಂದಿರುವ ಏರ್‌ಕ್ರಾಫ್ಟ್ ಆಬ್ಜೆಕ್ಟ್ಸ್ ಬಿಲ್ -2025 ಮಂಡಿಸಿದೆ. ಈ ಮಸೂದೆ ವಿಮಾನ ಉಪಕರಣಗಳಿಗೆ ಹಾನಿ ಪರಿಹಾರಗಳನ್ನು ಶಾಸನಬದ್ಧಗೊಳಿಸುತ್ತದೆ. ವಿಮಾನ ವಸ್ತುಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಜಾರಿಗೊಳಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಅಧಿಕಾರ ನೀಡುತ್ತದೆ ಎಂದರು.
ಇದನ್ನೂ ಓದಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮದುವೆ ಸಂಭ್ರಮ ಆರಂಭ; ಏನಿದರ ವಿಶೇಷತೆ ಗೊತ್ತೆ?
ಇದನ್ನೂ ಓದಿ: ಬಜೆಟ್ ಅಧಿವೇಶನ: ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ