Australia Pm on Jasprit bumrah: ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸದ್ಯ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸರಣಿ ಉದ್ಧಕ್ಕೂ ಬೌಲಿಂಗ್ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಬುಮ್ರಾ ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಕಾಡುತ್ತಿದ್ದಾರೆ.
ಈ ವರೆಗೂ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ 30 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ವಿಶ್ವದ ಒಟ್ಟಾರೆ ನಾಲ್ಕನೇ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಹೌದು. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಬುಮ್ರಾ ಕುರಿತು ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಅಲ್ಬನೀಸ್ ಮಾತನಾಡಿದ್ದಾರೆ.
ಹೌದು, ಶುಕ್ರವಾರ (ನಾಳೆ) ಸಿಡ್ನಿಯಲ್ಲಿ ನಡೆಯಲಿರುವ 5ನೇ ಮತ್ತು ಅಂತಿಮ ಟೆಸ್ಟ್ಗೂ ಮುನ್ನವೇ ಹೊಸ ವರ್ಷಾಚರಣೆ ಹಿನ್ನೆಲೆ ಬುಧವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬುಮ್ರಾ ಅವರನ್ನು ಗುಣಗಾನ ಮಾಡಿದ ಅಲ್ಬನೀಸ್ ಬುಮ್ರಾ ವಿರುದ್ಧ ಹೊಸ ಕಾನೂನು ಜಾರಿ ಮಾಡಬೇಕು ಎಂದರು.
ಬುಮ್ರಾ ಬಲಗೈ ಬದಲಿಗೆ ಎಡಗೈನಿಂದ ಬೌಲಿಂಗ್ ಮಾಡಬೇಕು ಅಥವಾ ಆಫ್ ಒನ್ ಸ್ಟೆಪ್ಗೆ ಮುಂಚಿತವಾಗಿ ಬೌಲ್ ಎಸೆಯಬೇಕು ಎಂಬ ಕಾನೂನು ಜಾರಿಗೆ ತರುತ್ತೇವೆ ಎಂದು ತಮಾಷೆಯಾಗಿ ಹೇಳಿದರು. ಅಲ್ಲದೇ ಅವರನ್ನು ಕೊಂಡಾಡಿದ ಪ್ರಧಾನಿ ಬುಮ್ರಾ ಅವರ ಬೌಲಿಂಗ್ ನೋಡುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ ಎಂದು ಗುಣಗಾನ ಮಾಡಿದರು.
5ನೇ ಟೆಸ್ಟ್ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ: ಸಿಡ್ನಿ ಮೈದಾನದಲ್ಲಿ ನಾಳೆ ನಡೆಯಲಿರುವ 5ನೇ ಮತ್ತು ಅಂತಿಮ ಟೆಸ್ಟ್ಗಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ವರದಿಗಳಾಗುತ್ತಿವೆ. ಅಲ್ಲದೇ ನಾಯಕ ರೋಹಿತ್ ಶರ್ಮಾ ಈ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ನಾಯಕನಾಗಿ ಬುಮ್ರಾ ಅಥವಾ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಜೊತೆಗೆ ವೇಗದ ಬೌಲರ್ ಆಕಾಶ್ ದೀಪ್ ಬೆನ್ನು ನೋವಿನಿಂದ ತಂಡದಿಂದ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಅಥವಾ ಹರ್ಷಿತ್ ರಾಣಾ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಾಕಿಂಗ್ ನ್ಯೂಸ್!- ಸಿಡ್ನಿ ಟೆಸ್ಟ್ನಿಂದ ರೋಹಿತ್ ಶರ್ಮಾ ಔಟ್: ಕನ್ನಡಿಗ ರಾಹುಲ್ಗೆ ಮಹತ್ವದ ಜವಾಬ್ದಾರಿ!