ದಾವಣಗೆರೆ: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಸರ್ಕಾರ ಪರಿಷ್ಕರಿಸಲು ಚಿಂತನೆ ನಡೆಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಪರಿಷ್ಕರಿಸಲು ಸರ್ಕಾರ ತೀರ್ಮಾನಿಸಿದೆ.
ಶೇ.15ರಷ್ಟು ದರ ಪರಿಷ್ಕರಣೆ ಮಾಡಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಇದೇ ಜನವರಿ 5 ರಿಂದ ಹೊಸ ದರ ಪರಿಷ್ಕರಣೆ ಅನ್ವಯವಾಗಲಿದೆ.
ಈ ಬಗ್ಗೆ ಪ್ರಯಾಣಿಕ ಅಜಯ್ ಸಾರಥಿ ಅವರು ಪ್ರತಿಕ್ರಿಯಿಸಿ, "ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಮಾಡಿದ್ದಾರೆ, ಇದೀಗ ಬಸ್ ಪ್ರಯಾಣ ದರ ಭರಿಸಲು ಪುರುಷರಿಗೆ ಪ್ರಯಾಣ ದರ ಹೆಚ್ಚು ಮಾಡಿ ಹೊರೆ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಸಾಕಾಗಿದೆ. 15% ದರ ಏರಿಕೆ ಮಾಡಿದ್ರೆ ಹೊರೆಯಾಗುತ್ತದೆ. ಪ್ರಯಾಣ ದರ ಅಲ್ಲದೆ ಇನ್ನಿತರ ವಸ್ತುಗಳ ದರ ಕೂಡ ಏರಿಕೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಉಚಿತ ಮಾಡ್ತಿರಾ ಆರೋಗ್ಯ, ಶಿಕ್ಷಣ ಉಚಿತ ಕೊಡಿ ಎಂದು ಒತ್ತಾಯಿಸಿದರು.
ಸರ್ಕಾರದ ನಡೆಯಿಂದ ದಾವಣಗೆರೆ ಜನ ಗರಂ : ಈ ವಿಚಾರವಾಗಿ ದಾವಣಗೆರೆ ನಿವಾಸಿ ರಾಜೇಶ್ವರಿ ಅವರು ಪ್ರತಿಕ್ರಿಯಿಸಿ, "ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಆಗಿದೆ. ಅದು ಅವಶ್ಯಕತೆ ಇದ್ದಿಲ್ಲ. ಇದಲ್ಲದೆ ಪ್ರತಿಯೊಂದು ವಸ್ತುಗಳ ದರ ಹೆಚ್ಚಾಗಿದೆ. ಗೃಹ ಲಕ್ಷ್ಮಿ ಯೋಜನೆ ಕೊಟ್ಟು ಎರಡು ಸಾವಿರ ಹಣದ ಆಸೆ ತೋರಿಸಿ ಪುರುಷರ ಜೇಬಿಗೆ ಕತ್ತರಿ ಹಾಕ್ತಿದ್ದೀರಿ. ಗೃಹ ಲಕ್ಷ್ಮಿ ಆಸೆ ತೋರಿಸಿದ್ದೀರಿ, ಅದರಿಂದ ಪ್ರಯೋಜನ ಆಗ್ತಿಲ್ಲ. ನಮ್ಮಿಂದ ಪಡೆದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೊಡ್ತಿದ್ದಾರೆ. ಜಾಸ್ತಿ ಮಾಡ್ತಾ ಹೋಗ್ತಿರುವ ಸರ್ಕಾರದ ನಡೆಯಿಂದ ಮನೆಯಲ್ಲಿ ಪುರುಷರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ದರವನ್ನು ಪರಿಷ್ಕರಿಸಲು ಹೋಗದೆ ದರ ಕಡಿಮೆ ಮಾಡಿ'' ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ : ರಾಜ್ಯ ಸಾರಿಗೆ ಬಸ್ ಪ್ರಯಾಣ ದರದಲ್ಲಿ ಏರಿಕೆ: ಎಷ್ಟು, ಯಾವಾಗಿನಿಂದ ಎಂಬುದನ್ನು ತಿಳಿಯಿರಿ - TRANSPORT BUS FARE HIKE