ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಆರು ತಿಂಗಳ ಶಿಶುವಾಗಿದ್ದಾಗಲೇ ವಿ.ಸೋಮಶೇಖರ್ ಅವರ ಪ್ರೇಮದ ಕಾಣಿಕೆ (1976) ಚಿತ್ರದಲ್ಲಿ ಕಾಣಿಸಿಕೊಂಡವರು (ಅತಿಥಿ ಪಾತ್ರ) ಮತ್ತು ಒಂದು ವರ್ಷದ ಮಗುವಾಗಿದ್ದಾಗ ಸನಾದಿ ಅಪ್ಪಣ್ಣ (1977) ಚಿತ್ರದಲ್ಲಿ ಕಾಣಿಸಿಕೊಂಡರು. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಚಂದನವನದಲ್ಲಿ ಮಿಂಚಿದರು. ನಟನಾಗಿ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.
ಮಗುವಾಗಿ, ಬಾಲನಟನಾಗಿ ಕಾಣಿಸಿಕೊಂಡ ಚಿತ್ರಗಳು: 1976ರಿಂದ 1988ರವರೆಗೆ ಹಲವು ಚಿತ್ರಗಳಲ್ಲಿ ಮಗುವಾಗಿ, ಬಾಲನಟನಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ. ಕೆಲವು ಅತಿಥಿ ಪಾತ್ರಗಳಾದರೆ, ಹಲವು ಪ್ರಮುಖ ಪಾತ್ರಗಳು. ಆ ಪೈಕಿ, ಪ್ರೇಮದ ಕಾಣಿಕೆ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಾಗ್ಯವಂತ, ಭಾಗ್ಯವಂತ, ಹೊಸ ಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಲ್ಹಾದ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂವು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್ ಇತ್ಯಾದಿ.
ನಾಯಕ ನಟನಾಗಿ...:2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ಸಿನಿಮಾ ವೃತ್ತಿಜೀವನ ಆರಂಭಿಸಿದರು. ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು, ಮಿಲನಾ, ಬಿಂದಾಸ್, ರಾಜ್ - ದಿ ಶೋಮ್ಯಾನ್, ರಾಮ್, ಪೃಥ್ವಿ, ಜಾಕಿ, ಹುಡುಗರು, ಪರಮಾತ್ಮ, ಅಣ್ಣ ಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಪವರ್, ಮೈತ್ರಿ, ರಣ ವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡ್ಗ, ರಾಜಕುಮಾರ, ಅಂಜನಿ ಪುತ್ರ ಮತ್ತು 2021ರಲ್ಲಿ ಬಂದ ಯುವರತ್ನ ಇವರ ಕೊನೆ ಸಿನಿಮಾ. ಮರಣದ ನಂತರ, ಜೇಮ್ಸ್, ಲಕ್ಕಿ ಮ್ಯಾನ್, ಗಂಧದ ಗುಡಿ ಬಿಡುಗಡೆ ಆಯಿತು.
ಪುನೀತ್ ರಾಜ್ಕುಮಾರ್ಗೆ ಸಂದ ಪ್ರತಿಷ್ಠಿತ ಗೌರವಗಳಿವು:
- ಬೆಟ್ಟದ ಹೂವು (1985) ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
- ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ನಲ್ಲಿ ಬೆಟ್ಟದ ಹೂವು ಸಿನಿಮಾದಲ್ಲಿನ ನಟನೆಗೆ 1986ರಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದರು.
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು: ಮಿಲನ (2007-08) - ಅತ್ಯುತ್ತಮ ನಟ ಮತ್ತು ಜಾಕಿ (2010-11) - ಅತ್ಯುತ್ತಮ ನಟ ಪ್ರಶಸ್ತಿ.
- ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವಿ ಅವಾರ್ಡ್ಸ್: ಹುಡುಗರು (2011) - ಅತ್ಯುತ್ತಮ ನಟ, ಯಾರೇ ಕೂಗಾಡಲಿ (2013) - ದಕ್ಷಿಣ ಭಾರತದ ಯೂತ್ ಐಕಾನ್, ರಣ ವಿಕ್ರಮ (2016) - ಅತ್ಯುತ್ತಮ ನಟ, ರಾಜಕುಮಾರ (2018) - ಅತ್ಯುತ್ತಮ ನಟ ಪ್ರಶಸ್ತಿ.
- ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್: ಅರಸು (2007) - ಅತ್ಯುತ್ತಮ ನಟ, ಹುಡುಗರು (2011) - ಅತ್ಯುತ್ತಮ ನಟ, ರಣ ವಿಕ್ರಮ (2015) - ಅತ್ಯುತ್ತಮ ನಟ, ರಾಜಕುಮಾರ (2017) - ಅತ್ಯುತ್ತಮ ನಟ ಅವಾರ್ಡ್.
ಮರಣೋತ್ತರ ಗೌರವಗಳು:
- ಕರ್ನಾಟಕ ರತ್ನ: ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ 67ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗೌರವ ಸೂಚಿಸಲಾಯಿತು.
- 2022ರ ಮಾರ್ಚ್ 22ರಂದು, ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಪುನೀತ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಲಾಯಿತು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೌರವಕ್ಕೆ ಪಾತ್ರರಾದರು.
- ಪುನೀತ್ ಜನ್ಮದಿನವನ್ನು "ಸ್ಫೂರ್ತಿ ದಿನ" ಎಂದು ಆಚರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತು.
- 2022ರ ಮೇ 3ರಂದು 2021ರ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
- ಲಾಲ್‌ಬಾಗ್ ಪುಷ್ಪ ಪ್ರದರ್ಶನದ 212ನೇ ಆವೃತ್ತಿಯನ್ನು ಪುನೀತ್ ಮತ್ತು ತಂದೆ ಡಾ.ರಾಜ್‌ಕುಮಾರ್ ಅವರಿಗೆ ಗೌರವಾರ್ಥವಾಗಿ ಸಮರ್ಪಿಸಲಾಯಿತು.
- 2022ರ ಮೈಸೂರು ದಸರಾ ಮೆರವಣಿಗೆ ಸಂದರ್ಭದಲ್ಲಿ ಅವರಿಗೆ ಸಮರ್ಪಿತವಾದ ಟ್ಯಾಬ್ಲೋ ಮೂಲಕ ಗೌರವ ಸೂಚಿಸಲಾಯಿತು.
- 67ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅವರಿಗೆ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯಿತು.
- 2022ರ ಅಕ್ಟೋಬರ್ 22 ಮತ್ತು 23ರಂದು ಬೆಂಗಳೂರಿನ ರೆಸ್ಟೋರೆಂಟ್‌ಗಳು ಫುಡ್ ಫೆಸ್ಟಿವಲ್ ಹಮ್ಮಿಕೊಂಡಿತ್ತು.
- ಅವರ ನಿಧನದ ಒಂದು ವರ್ಷದೊಳಗೆ ಬಿಡುಗಡೆಯಾದ ಎಲ್ಲಾ 200 ಕನ್ನಡ ಸಿನಿಮಾಗಳು ತಮ್ಮ ಆರಂಭಿಕ ಕ್ರೆಡಿಟ್‌ಗಳಲ್ಲಿ ಅಪ್ಪು ಅವರಿಗೆ ಗೌರವ ಸಲ್ಲಿಸಿದ್ದವು.
- ಅವರ ಪ್ರಥಮ ಪುಣ್ಯಸ್ಮರಣೆಯಂದು ಅವರ ಸ್ಮಾರಕದ ಬಳಿ ಹಾರಗಳನ್ನೊಳಗೊಂಡ 75 ಕಟೌಟ್‌ಗಳನ್ನು ಹಾಕಲಾಗಿತ್ತು.
- ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ನಡುವಿನ 12-ಕಿಮೀ ಉದ್ದದ ಬೆಂಗಳೂರು ಹೊರ ವರ್ತುಲ ರಸ್ತೆಗೆ ಡಾ. ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ಹೆಸರಿಸಲಾಯಿತು.
- 2023ರಲ್ಲಿ ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಉತ್ಸವದ ಉದ್ಘಾಟನೆಯ ಅಂಗವಾಗಿ ಪುನೀತ್ ಅವರ 23 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
- 2023ರ ಮಾರ್ಚ್ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋವಿಂದರಾಜನಗರ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ನಟನ ಹೆಸರಿನಲ್ಲಿ ನಿರ್ಮಿಸಲಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು.
- 2023ರ ಅಕ್ಟೋಬರ್ 31ರಂದು ಕರ್ನಾಟಕ ಆರೋಗ್ಯ ಇಲಾಖೆಯು ಹಠಾತ್ ಹೃದಯಾಘಾತ ಮತ್ತು ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ಪೂರೈಸೋ ಸಲುವಾಗಿ ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಪ್ರಾರಂಭಿಸಿತು.
- ಯೋಜನೆಯ ಎರಡನೇ ಹಂತವನ್ನು 2024ರ ಮಾರ್ಚ್ ತಿಂಗಳಲ್ಲಿ ಪ್ರಾರಂಭಿಸಲಾಯಿತು.
- ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಸ್ಮರಣಾರ್ಥ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಸಾಲಿನ ಮಾರ್ಚ್ 17ರಂದು ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ:"ಅಪ್ಪು" ಹೆಸರಲ್ಲಿ ಸೈಕಲ್ ಮೇಲೆ ಅಭಿಮಾನಿಯ ಪ್ರಪಂಚ ಪರ್ಯಟನೆ ; 5 ಲಕ್ಷ ಗಿಡ ನೆಡುವ ಗುರಿ - APPU FAN CYCLE YATRA
ಹೀಗೆ ನೂರಾರು ಗೌರವಕ್ಕೆ ಪುನೀತ್ ರಾಜ್‌ಕುಮಾರ್ ಪಾತ್ರರಾಗಿದ್ದಾರೆ. ಇಂದಿಗೂ ಅವರ ಹೆಸರಿನಲ್ಲಿ ಸತ್ಕಾರ್ಯಗಳು ಮುಂದುವರಿದಿವೆ.