'ಟಾಕ್ಸಿಕ್' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಕೆಜಿಎಫ್ 1 ಮತ್ತು 2 ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಸಂಪಾದಿಸಿರೋ ರಾಕಿಂಗ್ ಸ್ಟಾರ್ ಸಿನಿಮಾ ಮೇಲೆ ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಗಣ್ಯರೂ ಕೂಡಾ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನ ಭೇಟಿ ಸಲುವಾಗಿ ಸುದ್ದಿಯಲ್ಲಿದ್ದ ತಂಡವಿಂದು ತಮ್ಮ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದೆ.
'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿಭಾಯ್ ಅಭಿನಯಿಸುತ್ತಿರುವ ಸಿನಿಮಾವೇ 'ಟಾಕ್ಸಿಕ್'. ಈ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಆದಾಗಿಂದಲೂ ಸ್ಯಾಂಡಲ್ವುಡ್ನಿಂದ ಹಿಡಿದು ಬಾಲಿವುಡ್ ವರೆಗೂ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅನೌನ್ಸ್ಮೆಂಟ್ಗೂ ಮುನ್ನ ಬಂದ ಅಂತೆಗಕಂತೆಗಳೂ ಕೂಡ ಕಡಿಮೆಯೇನಿಲ್ಲ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ನಾಯಕಿ ಕರೀನಾ ಕಪೂರ್ ಖಾನ್ ಎಂದೆಲ್ಲಾ ವದಂತಿ ಹರಡಿತ್ತು. ಆದರೆ ಇಂದು ಅಧಿಕೃತವಾಗಿ 'ಟಾಕ್ಸಿಕ್' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ನಡೆದ ಟಾಕ್ಸಿಕ್ ಮುಹೂರ್ತ ಸಮಾರಂಭಕ್ಕೆ ಚಿತ್ರತಂಡ ಸಾಕ್ಷಿಯಾಗಿತ್ತು.
ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದಿರುವ ವಿಷಯ ಅಂದ್ರೆ, ಯಶ್ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಲೈಟ್ ಬಾಯ್ ಕೈಯಲ್ಲಿ ತಮ್ಮ ಪ್ಯಾನ್ ವರ್ಲ್ಡ್ ಮೂವಿಯ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿದ್ದಾರೆ. ಈ ಮೂಲಕ ತಂತ್ರಜ್ಞ ಹಾಗೂ ಕಾರ್ಮಿಕರ ಮೇಲೆ ತಮಗಿರುವ ಗೌರವ, ಕಾಳಜಿಯನ್ನು ಸಾಬೀತುಪಡಿಸಿದ್ದಾರೆ. ಈ ಸುದ್ದಿಯನ್ನು ಕೆವಿನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ತಿಳಿಸಿದೆ.
ಬೆಂಗಳೂರಿನ ಹೆಚ್ಎಂಟಿ ಜಾಗದಲ್ಲಿ ಸಿದ್ಧವಾಗಿರುವ ಟಾಕ್ಸಿಕ್ ಸೆಟ್ನಲ್ಲೇ ಮುಹೂರ್ತ ಕಾರ್ಯಕ್ರಮ ನಡೆಸಲಾಯಿತು. ಇಂದಿನಿಂದಲೇ ಶೂಟಿಂಗ್ ಸಹ ಆರಂಭವಾಗಲಿದ್ದು, ರಾಕಿ ಭಾಯ್ ಕೂಡಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೆವಿನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಒಟ್ಟಾರೆ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ ಸಿಕ್ಕಿದೆ.