ರಾಯಚೂರು: ರಾಜ್ಯದಲ್ಲಿ ಹೊಸ ವರ್ಷದ ಮೊದಲ ದಿನವೇ ಮತ್ತೋರ್ವ ಬಾಣಂತಿ ಮೃತರಾಗಿದ್ದಾರೆ. ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದ ಬಾಣಂತಿ ಹಾಗೂ ಶಿಶು ಚಿಕಿತ್ಸೆಗೆ ಸ್ಫಂದಿಸದೇ ಮೃತಪಟ್ಟ ಘಟನೆ ಇಲ್ಲಿನ ರಿಮ್ಸ್ (ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸೀದಾಪೂರ ಗ್ರಾಮದ ಶಿವಲಿಂಗಮ್ಮ (22) ಮೃತ ಬಾಣಂತಿ ಎಂದು ತಿಳಿದು ಬಂದಿದೆ. ಚೊಚ್ಚಲ ಹೆರಿಗೆಯ ಸಮಯದಲ್ಲಿಯೇ ಬಾಣಂತಿ ಸಾವನ್ನಪ್ಪಿದ್ದಾರೆ. ಅವರನ್ನು ಮಾನವಿ ಆಸ್ಪತ್ರೆಯಿಂದ ಡಿಸೆಂಬರ್ 27ರಂದು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಿಮ್ಸ್ಗೆ ದಾಖಲಾದ ಬಳಿಕವೂ ಕೂಡ ಶಿವಲಿಂಗಮ್ಮ ಅವರಿಗೆ ರಕ್ತದೊತ್ತಡ ಹಾಗೂ ಇತರ ಸಮಸ್ಯೆಗಳು ಕಂಡು ಬಂದಿದ್ದವು. ಸಿಸೇರಿಯನ್ ಹೆರಿಗೆ ನಂತರವೂ ಕೂಡ ರಕ್ತಸ್ರಾವ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದೇ, ಸಾವನ್ನಪ್ಪಿದ್ದಾರೆ. ಬಾಣಂತಿ ಹಾಗೂ ಶಿಶುವನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ರಿಮ್ಸ್ ಆಸ್ಪತ್ರೆ ಮೆಡಿಕಲ್ ಸೂಪರ್‌ಡೆಂಟ್ ಕೆ. ಭಾಸ್ಕರ್, ''ಡಿಸೆಂಬರ್ 27ರಂದು ಶಿವಲಿಂಗಮ್ಮ ಅವರು ರಿಮ್ಸ್ ಆಸ್ಪತ್ರೆಗೆ ಮಾನವಿ ಆಸ್ಪತ್ರೆಯಿಂದ ರೆಫರ್ ಆಗಿ ದಾಖಲಾಗಿದ್ದರು. ಪ್ರಸವ ಪೂರ್ವ ಸಂಪೂರ್ಣ ಪರೀಕ್ಷೆಗಳು ಮಾನವಿ ಆಸ್ಪತ್ರೆಯಲ್ಲೇ ನಡೆದಿದ್ದವು. ರಿಮ್ಸ್ಗೆ ಬಂದ ಬಳಿಕವೂ ಅವರು ರಕ್ತದೊತ್ತಡದಿಂದ ಬಳಲುತ್ತಿದ್ದರು. ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿಸೇರಿಯನ್ ಚಿಕಿತ್ಸೆ ಸಂದರ್ಭದಲ್ಲಿ ಹಾಗೂ ನಂತರವೂ ಕೂಡ ಅತಿ ರಕ್ತದೊತ್ತಡ ಕಂಡುಬಂದಿತ್ತು. ವೈದ್ಯರೆಲ್ಲರೂ ಕೂಡ ಅಗತ್ಯ ಚಿಕಿತ್ಸೆ ನೀಡಿದರೂ ಕೂಡ, ಜ.1ರ ಮುಂಜಾನೆ 4.30ಕ್ಕೆ ಸಾವನ್ನಪ್ಪಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ