ಬಲೋತರ್(ರಾಜಸ್ಥಾನ): ಇಲ್ಲಿನ ಮೆಗಾ ಹೆದ್ದಾರಿಯಲ್ಲಿ ಇಂದು (ಸೋಮವಾರ) ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. 8 ಮಂದಿ ಇತರರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಬಲೋತರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್ ನೀಡಿದ ಮಾಹಿತಿ ಪ್ರಕಾರ, ಸೋಮವಾರ ಸಂಜೆ ಕಾರು ಮತ್ತು ಐಷಾರಾಮಿ ಎಸ್‌ಯುವಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ ಪೈಕಿ ಇಬ್ಬರು ಮಕ್ಕಳು, ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ.
ಪಾಯಲ ಪ್ರದೇಶದ ನಿವಾಸಿ ಅಶೋಕ್ ಕುಮಾರ್ ಸೋನಿ ಅವರ ಕುಟುಂಬವು, ಸಿಂಧರಿ ಎಂಬಲ್ಲಿಂದ ಕೆಲ ಸರಕುಗಳನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಮೆಗಾ ಹೆದ್ದಾರಿಯಲ್ಲಿ ಗುಜರಾತ್ನಿಂದ ಬರುತ್ತಿದ್ದ ಎಸ್‌ಯುವಿ ಕಾರು ಡಿಕ್ಕಿಯಾಗಿದೆ. ಅತಿ ವೇಗದಲ್ಲಿ ಕಾರುಗಳು ಭೀಕರವಾಗಿ ಗುದ್ದಿಕೊಂಡಿವೆ. ಇದರಿಂದ ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. 8 ಮಂದಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಯ ನಂತರ ಜೋಧ್‌ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ವಾಹನಗಳಲ್ಲಿ 13 ಜನರಿದ್ದರು: ಎರಡೂ ಕಾರುಗಳಲ್ಲಿ 13 ಮಂದಿ ಇದ್ದರು. ಅಪಘಾತ ಸಂಭವಿಸಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದುರಂತ ಹೇಗೆ ಸಂಭವಿಸಿತು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಮಂಡ್ಯ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ : ಕಾರು ಬಿದ್ದು ಮೂವರು ಸಾವು
ದ್ವಾರಕಾಗೆ ತೆರಳುತ್ತಿದ್ದ ಬಸ್ ಪ್ರಪಾತಕ್ಕೆ: ಐವರು ಯಾತ್ರಿಕರು ಸಾವು, 17 ಜನ ಗಂಭೀರ