ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಾರಣವೆಂದು ಆರೋಪಿಸಿ ಘೋಷಣೆ ಕೂಗಿ ಪೋಸ್ಟರ್ ಅಂಟಿಸಿದ ಆರೋಪದಡಿ ಮೂವರು ವಿಧಾನ ಪರಿಷತ್ ಸದಸ್ಯರು ಸೇರಿ 13 ಮಂದಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಗ್ರೌಂಡ್ಸ್ ಠಾಣೆಯ ಪಿಎಸ್ಐ ಶಶಿಧರ್ ವಣ್ಣೂರು ನೀಡಿದ ದೂರಿನ ಮೇರೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಸಿ.ಟಿ.ರವಿ, ರವಿಕುಮಾರ್, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಒಳಗೊಂಡಂತೆ 13 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೀದರ್ನ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಬಿಜೆಪಿ ನಿಯೋಗ ಆರೋಪಿಸಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಮನೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಪೋಸ್ಟರ್ಗಳನ್ನು ಅಂಟಿಸಿ ಪ್ರತಿಭಟಿಸಿತ್ತು.
ಸುಸೈಡ್ ಹಾಗೂ ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಪೋಸ್ಟರ್ಗಳನ್ನು ಕಾರ್ಯಕರ್ತರು ಎಲ್ಲೆಡೆ ಅಂಟಿಸಿದ್ದರು. ಈ ಬಗ್ಗೆ ತಿಳಿವಳಿಕೆ ನೀಡಿದರೂ ಮಾತು ಕೇಳದೇ ಪೋಸ್ಟರ್ ಅಂಟಿಸಿದ್ದರು. ಈ ಸಂಬಂಧ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಹಾಗೂ ರವಿಕುಮಾರ್ ಒಳಗೊಂಡಂತೆ 13 ಮಂದಿಯನ್ನ ಪೊಲೀಸ್ ವಶಕ್ಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿತ್ತು. ಸಾರ್ವಜನಿಕ ಸ್ವತ್ತಿಗೆ ಹಾನಿ ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ