ದಾವಣಗೆರೆ: ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರು ಅನುದಾನ ಬಿಡುಗಡೆಯಾಗಿಲ್ಲ. ವಯಸ್ಸಿಗೆ ಬಂದಿರುವ ಮಗಳಿಗೆ ಮದುವೆ ಮಾಡಲು ಹಣ ಇಲ್ಲದೆ ಗುತ್ತಿಗೆದಾರ ಅಸಹಾಯಕತೆಯಿಂದ ದಯಾಮರಣ ಕೋರಿ ಸಿಎಂ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಹರಿಹರದ ನಿವಾಸಿ ಪ್ರಥಮ ದರ್ಜೆಯ ಗುತ್ತಿಗೆದಾರ ಮೊಹಮ್ಮದ್ ಮಝರ್ ಅವರು ಈಟಿವಿ ಭಾರತನೊಂದಿಗೆ ಮಾತನಾಡಿ,
"2022-23ನೇ ಸಾಲಿನ ವಿಶೇಷ ಅನುದಾನ ಅಡಿಯಲ್ಲಿ ಟೆಂಡರ್ ಕರೆದಿದ್ದರು. ಟೆಂಡರ್ ಪಡೆಯಲು ನಾನು ಭಾಗಿಯಾಗಿದ್ದೆ. ಹರಿಹರ ನಗರಸಭೆ ಹಾಗು ಜಿಲ್ಲಾಧಿಕಾರಿ ಅವರು ಕಾಮಗಾರಿ ಕಾರ್ಯದೇಶ ನೀಡಿದ್ದರು. ಅನುಮೋದನೆ ಆದ ಬಳಿಕ ಟೆಂಡರ್ ನನಗೆ ಸಿಕ್ಕಿತು. ನಾನು ಸಾಲಸೋಲ ಮಾಡಿ ಕಾಮಗಾರಿ ಮಾಡಿದ್ದೇನೆ. ಕಾಮಗಾರಿಗಾಗಿ ಮೆಟಿರಿಯಲ್ ಖರೀದಿ ಮಾಡಿದ್ದೇನೆ. ಅದರ ಹಣ ಸಂದಾಯ ಮಾಡಬೇಕು. ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಹರಿಹರ ನಗರಸಭೆ ವ್ಯಾಪ್ತಿಯ 29ನೇ ವಾರ್ಡ್ನ ಖಬರಸ್ಥಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದೇನೆ. 21ನೇ ವಾರ್ಡ್ನಲ್ಲಿ 5 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದೇನೆ. ಕಾಮಗಾರಿ ಮುಗಿದಿದೆ, ಹಣ ಕೇಳಿದರೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ನನಗೆ 25 ಲಕ್ಷ ಹಣ ಬರಬೇಕಾಗಿದೆ. ನನ್ನ ಮಗಳ ಮದುವೆ ಇದೆ. ಮದುವೆ ದಿನಾಂಕ ನಿಗದಿ ಮಾಡಿಸಬೇಕಾಗಿದೆ. ಅದಕ್ಕಾಗಿ ನಾನು ದಯಾಮರಣ ಕೋರಿ ಸಿಎಂ ಸಿದ್ದರಾಮಯ್ಯ ಹಾಗು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದೇನೆ. ನಾನು ಕಣ್ಣು ಮುಚ್ಚಬಹುದು, ಆ ದೇವರು ಅವರನ್ನು ನೋಡಿಕೊಳ್ಳಲಿ. ಕಳೆದ ಸರ್ಕಾರದಲ್ಲಿ ಹೀಗಾಯಿತು. ಇದೀಗ ಈ ಸರ್ಕಾರದಲ್ಲೂ ಅದೇ ಆಗುತ್ತಿದೆ. ಮೊದಲು ನನ್ನ ಕಾಮಗಾರಿ ನೋಡಿ ಹಣ ಬಿಡುಗಡೆ ಮಾಡಲಿ" ಎಂದು ಮನವಿ ಮಾಡಿಕೊಂಡರು.
ಮಗಳ ಮದುವೆಗಾಗಿ ಬೇಕಾಗಿದೆ ಹಣ: "ಮಗಳು ಮದುವೆ ಇದೆ, ದಿನಾಂಕ ನಿಗದಿ ಮಾಡಬೇಕಾಗಿದೆ. ಹಣ ಇಲ್ಲದೇ ಮುಂದೂಡುತ್ತಿದ್ದೇನೆ. ಮದುವೆನೇ ಮುರಿದು ಬೀಳುವ ಹಂತಕ್ಕೆ ಬಂದಿದೆ. ಎಲ್ಲಿಂದ ಹಣ ತರಲಿ, ಮದುವೆ ಹೇಗೆ ಮಾಡಲಿ" ಎಂದು ಅಳಲು ಮೊಹಮ್ಮದ್ ಅವರು ತೋಡಿಕೊಂಡರು.
ಸ್ಥಳೀಯರರಿಂದಲೂ ಆಕ್ರೋಶ: ಅನುದಾನಕ್ಕಾಗಿ ಸ್ಥಳೀಯ ಮಸೀದಿಯವರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಅದರೆ ಯಾವುದೇ ಪ್ರಯೋಜನ ಆಗಿಲ್ಲ. ಮೆಕ್ಕಾ ಮಸೀದಿಯ ಮುತವಲ್ಲಿ ಎಮ್ ಇಲಿಯಾಜ್ ಈ ಬಗ್ಗೆ ಪ್ರತಿಕ್ರಿಯಿಸಿ "ಮೊಹಮ್ಮದ್ ಮಝರ್ ಅವರು ವಿಶೇಷ ಅನುದಾನ ಅಡಿಯಲ್ಲಿ ಕೆಲಸ ಶುರು ಮಾಡಿದ್ದರು. ಸಾಲ ಮಾಡಿ ಹಣ ಹಾಕಿ ಕಾಮಗಾರಿ ಪುರ್ಣಗೊಳಿಸಿದ್ದಾರೆ. ಆದರೆ ಹಣ ಮಾತ್ರ ಬಂದಿಲ್ಲ. ಒಂದೂವರೆ ವರ್ಷ ಕಳೆದರು ಕೂಡ ಯಾವುದೇ ಪ್ರಯೋಜನವಿಲ್ಲ. ಕಳೆದ ಸರ್ಕಾರದಲ್ಲಿ ಗುತ್ತಿಗೆದಾರರ ಸಮಸ್ಯೆ ಹೆಚ್ಚಿತ್ತು. ಇದೀಗ ಈ ಸರ್ಕಾರದಲ್ಲೂ ಇದೇ ರೀತಿ ಆಗುತ್ತಿದೆ. ಮಗಳ ಮದುವೆ ಇದೆ ಅವರು ಹಣಕ್ಕಾಗಿ ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಗಮನ ಹರಿಸಿ ಹಣ ಬಿಡುಗಡೆ ಮಾಡಬೇಕೆಂದು" ಮನವಿ ಮಾಡಿದರು.
ಇದನ್ನೂ ಓದಿ: ವರ್ಷಕ್ಕೆ 2,000 ಕೋಟಿ ರೂ. ನೀಡಿದರೆ ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆ : ಸಚಿವ ರಾಮಲಿಂಗಾ ರೆಡ್ಡಿ