ಬೆಂಗಳೂರು: ಅಪರಿಚಿತರಿಂದ ಗಿಫ್ಟ್ ಹೆಸರಿನಲ್ಲಿ ಮೊಬೈಲ್ ಫೋನ್, ಟ್ಯಾಬ್ ನಿಮ್ಮ ಮನೆ ಬಾಗಿಲಿಗೆ ಬಂದರೆ ಅವುಗಳನ್ನ ಬಳಸುವ ಮುನ್ನ ಎಚ್ಚರವಿರಲಿ. ಇದು ಸೈಬರ್ ವಂಚಕರ ಹೊಸ ವರಸೆಯೂ ಆಗಿರಬಹುದು. ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಮೊಬೈಲ್ ಗಿಫ್ಟ್ ಕಳುಹಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ ₹2.8 ಕೋಟಿ ರೂ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ತಾವೇ ಮೊಬೈಲ್ ಫೋನ್ ಕಥ ಕಳುಹಿಸಿ ವಂಚಿಸಿರುವ ಖದೀಮರ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ನವೆಂಬರ್ ತಿಂಗಳಲ್ಲಿ ಕರೆ ಮಾಡಿದ್ದ ವಂಚಕರು, ನಿಮ್ಮ ರಿವಾರ್ಡ್ ಪಾಯಿಂಟ್ಸ್ ಉತ್ತಮವಾಗಿರುವುದರಿಂದ ಕ್ರೆಡಿಟ್ ಕಾರ್ಡ್ ಆಫರ್ ಮಾಡುತ್ತಿದ್ದೇವೆ ಎಂದು ನಂಬಿಸಿದ್ದರು. ಬಳಿಕ ಹೊಸ ಸಿಮ್ ಕಾರ್ಡ್ ಒಂದನ್ನ ಖರೀದಿಸಿ ಅದರ ನಂಬರ್ ನೀಡುವಂತೆ ಕೇಳಿ ಪಡೆದುಕೊಂಡಿದ್ದರು. ಇದಾದ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ದೂರುದಾರರ ವಿಳಾಸಕ್ಕೆ ತಾವೇ ಹೊಸ ಮೊಬೈಲ್ ಫೋನ್‌ವೊಂದನ್ನ ಕಳುಹಿಸಿದ್ದರು.
ವಂಚಕರ ಕುರಿತು ಸುಳಿವಿರದ ದೂರುದಾರರು, ಹೊಸ ಮೊಬೈಲ್ ಫೋನ್‌ನಲ್ಲಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ. ಆದರೆ, ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ವಂಚಿಸಲು ಅಗತ್ಯ ಇರುವಂತೆ ಕ್ಲೋನಿಂಗ್ ಮತ್ತು ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡಿಟ್ಟಿದ್ದ ವಂಚಕರು, ಬ್ಯಾಂಕ್‌ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‌ನಲ್ಲಿ ಸೆಟ್ ಮಾಡಿಟ್ಟಿದ್ದರು. ಒಂದು ವಾರದ ಬಳಿಕ ತಮ್ಮ ಎಫ್‌ಡಿ ಖಾತೆಯಲ್ಲಿ ಹಣ ಕಡಿತವಾಗಿರುವುದನ್ನ ಗಮನಿಸಿದ ದೂರುದಾರರು, ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ತಿಳಿದು ಬಂದಿದೆ.
ಹಣ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣ ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಕಳಿಸಿದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಹಾಗೂ ಹಣ ವರ್ಗಾವಣೆಯಾದ ಖಾತೆಗಳ ವಿವರವನ್ನ ಕಲೆಹಾಕುತ್ತಿದ್ದಾರೆ.
ಮೊಬೈಲ್ ಗಿಫ್ಟ್ ಕಳಿಸಿ ಬ್ಯಾಂಕ್ ಖಾತೆಗೆ ಕನ್ನ: ಸೈಬರ್ ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಂಚನೆಗೆ ಅನುಕೂಲ ಆಗುವಂತಹ ಆ್ಯಪ್ಗಳನ್ನು ಮೊಬೈಲ್ಗಳಲ್ಲಿ ಇನ್‌ಸ್ಟಾಲ್ ಮಾಡಿ ಅವುಗಳನ್ನೇ ಬ್ಯಾಂಕ್ ಹೆಸರನಲ್ಲಿ ಜನರಿಗೆ ಗಿಫ್ಟ್ ಆಗಿ ಕಳುಹಿಸುತ್ತಾರೆ. ಜನರು, ಆ ಮೊಬೈಲ್ಗೆ ಸಿಮ್ ಹಾಕಿದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ. ಬ್ಯಾಂಕ್ ಖಾತೆಯಿಂದ ಹಣ ಕಟ್ ಆದ ಸಂದೇಶ ಕೂಡ ಬರದಂತೆ ಮಾಡುತ್ತಾರೆ.
ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ. ಶಿವಕುಮಾರ್ ಗುಣಾರೆ ಅವರು ಮಾತನಾಡಿ, ''ವೈಟ್ ಪೀಲ್ಡ್ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಸೈಬರ್ ವಂಚಕರು ಮೊಬೈಲ್ ಕಳುಹಿಸುತ್ತಾರೆ. ನಂತರ ನಿರಂತರವಾಗಿ ಫೋನ್‌ನಲ್ಲಿ ಸಂಪರ್ಕದಲ್ಲಿರುತ್ತಾರೆ. ಫೋನ್ಗೆ ಸಿಮ್ ಕಾರ್ಡ್ ಹಾಕುವಂತೆ ಹೇಳುತ್ತಾರೆ. ನಂತರ ಅದರಲ್ಲಿ ಬರುವಂತಹ ಮಾಹಿತಿಯನ್ನ ಅಪ್ಲೋಡ್ ಮಾಡುವಂತೆ ತಿಳಿಸುತ್ತಾರೆ. ಸಂತ್ರಸ್ತರು ಪ್ರತಿಯೊಂದು ಮಾಹಿತಿಯನ್ನ ರವಾನೆ ಮಾಡುತ್ತಾರೆ. ಈ ಪೋನ್ ಕ್ಲೋನ್ ಆಗಿರುವುದರಿಂದ ಬ್ಯಾಂಕ್‌ನಿಂದ ಬರುವ ಓಟಿಪಿ ವಂಚಕರ ಅಕೌಂಟ್ಗೆ ಹೋಗುತ್ತೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು. ಫ್ರೀಯಾಗಿ ಬಂದಿರುವ ಗಿಫ್ಟ್ಗಳನ್ನ ಬಳಕೆ ಮಾಡಬಾರದು'' ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಮಸ್ಕಾರ ಸರ್.. ನಿಮ್ಮ ಮನೆ ಪ್ರಿಡ್ಜ್ ರಿಪೇರಿ ಮಾಡಿದ್ದು ನಾನೇ ಎಂದು ವೃದ್ಧನಿಂದ 32 ಸಾವಿರ ಪೀಕಿದ ವಂಚಕ - NEW TYPE FRAUD CASE