ಬೆಂಗಳೂರು: ಕಸ್ಟಮ್ಸ್ ಹಾಗೂ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯನ್ನು ಬೆದರಿಸಿ 11 ಕೋಟಿ ರೂ. ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರಣ್, ತರುಣ್ ನಟಾನಿ ಹಾಗೂ ಧವಲ್ ಶಾ ಬಂಧಿತರು. ಟೆಕ್ಕಿಯೊಬ್ಬರಿಗೆ ಬೆದರಿಸಿದ್ದ ಆರೋಪಿಗಳು, 1 ತಿಂಗಳುಕಾಲ ಪೀಡಿಸಿ ವಿವಿಧ ಖಾತೆಗಳಿಗೆ 11 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದರು.
ದೂರಿನ ವಿವರ: ದೂರುದಾರ ಕೆಲಸ ಮಾಡುತ್ತಿದ್ದ ಕಂಪನಿಯು ತನ್ನ 50 ಲಕ್ಷ ರೂ. ಮೌಲ್ಯದ ಒಂದು ಷೇರನ್ನು ಆತನಿಗೆ ನೀಡಿತ್ತು. ಆ ಷೇರಿನ ಪ್ರಸ್ತುತ ಮೌಲ್ಯ 12 ಕೋಟಿ ರೂ. ಇರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು, ಪ್ರತ್ಯೇಕ ನಂಬರ್‌ಗಳಿಂದ ಆತನಿಗೆ ಕರೆ ಮಾಡಿ ತಾವು ಇ.ಡಿ, ಕಸ್ಟಮ್ಸ್ ಅಧಿಕಾರಿಗಳು ಅಂತಾ ಪರಿಚಯಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬಳಿಕ, ನಿಮ್ಮ ಖಾತೆಯಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆದಿದೆ. ತನಿಖೆ ನಡೆಸಬೇಕಿದೆ ಎಂದು ಆತನ ಕೆವೈಸಿ ದಾಖಲೆಗಳನ್ನು ಪಡೆದುಕೊಂಡಿದ್ದರು. ಬಳಿಕ ನಿಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ನೆರವಾಗುತ್ತೇವೆ ಎಂದು ನಂಬಿಸಿ, ಒಟ್ಟು 9 ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು. ಈ ರೀತಿ ಒಂದು ತಿಂಗಳ ಕಾಲ ಪೀಡಿಸಿ ಹಣ ಪಡೆದುಕೊಂಡ ಬಳಿಕ ಸಂಪರ್ಕಕ್ಕೆ ಸಿಗದೆ ಉಳಿದಿದ್ದ ಆರೋಪಿಗಳ ವಿರುದ್ಧ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಹೀಗೂ ಮಾಡ್ತಾರೆ ಹುಷಾರ್: ಬೆಂಗಳೂರಿನ ಟೆಕ್ಕಿಗೆ ಮೊಬೈಲ್ ಫೋನ್ ಗಿಫ್ಟ್ ಕಳುಹಿಸಿ ₹2.8 ಕೋಟಿ ವಂಚನೆ - ಸೈಬರ್ ವಂಚಕರ ಹೊಸ ವರಸೆ
ದೂರುದಾರರಿಂದ ಹಣ ವರ್ಗಾವಣೆಯಾದ ಖಾತೆಗಳ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಸೂರತ್ನ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ 7.5 ಕೋಟಿ ರೂ. ವರ್ಗಾವಣೆಯಾಗಿರುವುದು ತಿಳಿದುಬಂದಿತ್ತು. ಸೂರತ್ಗೆ ತೆರಳಿದ ಪೊಲೀಸರು ಚಿನ್ನದ ವ್ಯಾಪಾರಿಯ ಬಳಿ ತೆರಳಿ ಮಾಹಿತಿ ಸಂಗ್ರಹಿಸಿದಾಗ, ಆರೋಪಿಗಳು ವಂಚಿಸಿದ ಹಣದಲ್ಲಿ ಚಿನ್ನಾಭರಣ ಖರೀದಿಸಿದ್ದರು ಎಂಬುದು ಪತ್ತೆಯಾಗಿತ್ತು. ಬಳಿಕ ಹಣ ವರ್ಗಾವಣೆಯಾದ ಮತ್ತಿತರ ಖಾತೆಗಳ ಮಾಹಿತಿ ಕಲೆ ಹಾಕಿದ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಸಮಸ್ಯೆಗಳಿಗೆ ಔಷಧಿ ನೆಪದಲ್ಲಿ ವಂಚನೆ; ನಕಲಿ ಕಾಲ್ ಸೆಂಟರ್ ಪತ್ತೆ, 11 ಜನರ ಬಂಧನ