ನವದೆಹಲಿ:ಪ್ರಸ್ತುತ 3.1 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಆನ್ ಲೈನ್ ಗೇಮಿಂಗ್ ವಲಯವು 2034 ರ ವೇಳೆಗೆ 60 ಬಿಲಿಯನ್ ಡಾಲರ್ಗೆ ಬೆಳವಣಿಗೆಯಾಗುವ ಸಾಮರ್ಥ್ಯ ಹೊಂದಿದೆ ಎಂದು ವರದಿಯೊಂದು ಸೋಮವಾರ ತೋರಿಸಿದೆ. ಭಾರತದ ಗೇಮಿಂಗ್ ಕ್ಷೇತ್ರಕ್ಕೆ ಅಮೆರಿಕ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಗೇಮಿಂಗ್ ವಲಯಕ್ಕೆ ಬಂದ ಒಟ್ಟು 2.5 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ಪೈಕಿ 1.7 ಬಿಲಿಯನ್ ಡಾಲರ್ ಅಮೆರಿಕದಿಂದಲೇ ಬಂದಿದೆ. ವಿಶೇಷವೆಂದರೆ, ಈ ಎಫ್ಡಿಐ ಪೈಕಿ ಶೇಕಡಾ 90 ರಷ್ಟು ಎಫ್ಡಿಐ ಪೇ-ಟು-ಪ್ಲೇ ವಿಭಾಗಕ್ಕೆ ಹರಿದು ಬಂದಿದ್ದು, ಇದು ವಲಯದ ಒಟ್ಟಾರೆ ಮೌಲ್ಯಮಾಪನದ ಶೇಕಡಾ 85 ರಷ್ಟಿದೆ.
"ಇದು ವೇಗವಾಗಿ ಬೆಳೆಯುತ್ತಿರುವ ಭಾರತದ ಗೇಮಿಂಗ್ ಮಾರುಕಟ್ಟೆಯಲ್ಲಿ ಜಾಗತಿಕ ಹೂಡಿಕೆದಾರರು ಹೊಂದಿರುವ ಅಪಾರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. 2034 ರ ವೇಳೆಗೆ ಭಾರತದ ಗೇಮಿಂಗ್ ಉದ್ಯಮ 60 ಬಿಲಿಯನ್ ಡಾಲರ್ಗೆ ವೃದ್ಧಿಯಾಗಲಿದೆ" ಎಂದು ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟರ್ಶಿಪ್ ಫೋರಂ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಮತ್ತು ಸಿಇಒ ಡಾ. ಮುಕೇಶ ಅಘಿ ಹೇಳಿದರು.
ಗೇಮರ್ಗಳ ಠೇವಣಿ ಮೇಲೆ ಶೇ 28ರಷ್ಟು GST:ಆದಾಗ್ಯೂ, ಕಾನೂನು ಮತ್ತು ತೆರಿಗೆ ವಿಷಯದ ಸಮಸ್ಯೆಗಳು ಮುಂದುವರಿದಿವೆ. ಭಾರತದಲ್ಲಿ ಗೇಮರ್ಗಳ ಠೇವಣಿಯ ಮೇಲೆ ಅತಿ ಹೆಚ್ಚು ಶೇ 28ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ಯುಎಸ್ಐಎಸ್ಪಿಎಫ್ ಮತ್ತು ಟಿಎಂಟಿ ಲಾ ಪ್ರಾಕ್ಟೀಸ್ ವರದಿ ಹೇಳಿದೆ. ಜಾಗತಿಕವಾಗಿ ದೇಶೀಯ ನ್ಯಾಯವ್ಯಾಪ್ತಿಗಳಲ್ಲಿ ತೆರಿಗೆಗೆ ಆಧಾರವನ್ನು ರೂಪಿಸುವ ವಿಶ್ವಸಂಸ್ಥೆಯ ಕೇಂದ್ರ ಉತ್ಪನ್ನ ವರ್ಗೀಕರಣ (ಯುಎನ್ ಸಿಪಿಸಿ) ಆನ್ ಲೈನ್ ಗೇಮಿಂಗ್ ಅನ್ನು ಆನ್ ಲೈನ್ ಜೂಜಾಟದಿಂದ ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ ಎಂಬುದನ್ನು ವರದಿಯು ಎತ್ತಿ ತೋರಿಸಿದೆ.