ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಪರಿಸ್ಥಿತಿಗಳ ಮಧ್ಯೆ ಐಟಿ, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಸರಕು ಕ್ಷೇತ್ರಗಳಲ್ಲಿನ ಷೇರುಗಳ ಗಣನೀಯ ಖರೀದಿಯಿಂದಾಗಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಸತತ ಎರಡನೇ ದಿನವೂ ಏರಿಕೆಯೊಂದಿಗೆ ಕೊನೆಗೊಂಡಿವೆ.
30 ಷೇರುಗಳ ಸೆನ್ಸೆಕ್ಸ್ 115.39 ಪಾಯಿಂಟ್ ಅಥವಾ ಶೇಕಡಾ 0.15 ರಷ್ಟು ಏರಿಕೆಯಾಗಿ 76,520.38 ರಲ್ಲಿ ಕೊನೆಗೊಂಡಿದೆ. ವಹಿವಾಟಿನ ಒಂದು ಹಂತದಲ್ಲಿ ಇದು 338.55 ಪಾಯಿಂಟ್ ಅಥವಾ ಶೇಕಡಾ 0.44 ರಷ್ಟು ಏರಿಕೆಯಾಗಿ 76,743.54 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 50 ಪಾಯಿಂಟ್ಸ್ ಅಥವಾ ಶೇಕಡಾ 0.22 ರಷ್ಟು ಏರಿಕೆಯಾಗಿ 23,205.35 ರಲ್ಲಿ ಕೊನೆಗೊಂಡಿದೆ.
ಈ ಷೇರುಗಳಿಗೆ ಇಂದು ಲಾಭ: ಸೆನ್ಸೆಕ್ಸ್ ಷೇರುಗಳ ಪೈಕಿ ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾಸ್ಯುಟಿಕಲ್, ಜೊಮಾಟೊ, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೈಟಾನ್, ಐಟಿಸಿ ಮತ್ತು ಬಜಾಜ್ ಫೈನಾನ್ಸ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ.
ಈ ಎಲ್ಲ ಷೇರುಗಳಲ್ಲಿ ಕುಸಿತ: ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್ಸಿಎಲ್ ಟೆಕ್ನಾಲಜೀಸ್, ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಇಂಡಸ್ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ನಷ್ಟ ಅನುಭವಿಸಿವೆ.
ಮುಂದುವರಿದ ವಿದೇಶಿ ಹೂಡಿಕೆದಾರರ ಮಾರಾಟದ ರ‍್ಯಾಲಿ: ಭಾರತದ ಷೇರು ವಿನಿಮಯ ಕೇಂದ್ರದ ಅಂಕಿ - ಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ 4,026.25 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ.
ಹೇಗಿತ್ತು ಇಂದು ವಿದೇಶಿ ಮಾರುಕಟ್ಟೆಗಳ ವ್ಯವಹಾರದ ಸ್ಥಿತಿಗತಿ: ಏಷ್ಯಾದ ಮಾರುಕಟ್ಟೆಗಳ ಪೈಕಿ ಟೋಕಿಯೊ ಮತ್ತು ಶಾಂಘೈ ಮಾರುಕಟ್ಟೆಗಳು ಲಾಭದಲ್ಲಿ ಕೊನೆಗೊಂಡರೆ, ಹಾಂಕಾಂಗ್ ಮತ್ತು ಸಿಯೋಲ್ ನಷ್ಟದಲ್ಲಿ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಗುರುವಾರದ ಮಧ್ಯ-ಸೆಷನ್ ವಹಿವಾಟಿನಲ್ಲಿ ಸಕಾರಾತ್ಮಕ ಚಲನೆಯನ್ನು ತೋರಿಸಿವೆ. ಅಮೆರಿಕದ ಮಾರುಕಟ್ಟೆಗಳು ಬುಧವಾರದ ವಹಿವಾಟನ್ನು ಏರಿಕೆಯೊಂದಿಗೆ ಮುಕ್ತಾಯಗೊಳಿಸಿದವು. ಅಂತಾರಾಷ್ಟ್ರೀಯ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.20 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 79.16 ಡಾಲರ್ಗೆ ತಲುಪಿದೆ.
ದುರ್ಬಲವಾಗುತ್ತಲೇ ಸಾಗುತ್ತಿದೆ ರೂಪಾಯಿ: ಅಮೆರಿಕದ ಕರೆನ್ಸಿ ಬಲವರ್ಧನೆ ಮತ್ತು ವಿದೇಶಿ ನಿಧಿಗಳ ನಿರಂತರ ಹೊರಹರಿವಿನ ಮಧ್ಯೆ ರೂಪಾಯಿ ಗುರುವಾರ ಅಮೆರಿಕ ಡಾಲರ್ ವಿರುದ್ಧ 12 ಪೈಸೆ ಕುಸಿದು 86.47 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 86.46 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಡಾಲರ್ ವಿರುದ್ಧ ಗರಿಷ್ಠ 86.38 ಮತ್ತು ಕನಿಷ್ಠ 86.52 ರ ನಡುವೆ ಚಲಿಸಿತು. ಕೊನೆಗೆ ರೂಪಾಯಿ ಯುಎಸ್ ಡಾಲರ್ ವಿರುದ್ಧ 86.47 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು 12 ಪೈಸೆ ನಷ್ಟವಾಗಿದೆ.
ಇದನ್ನೂ ಓದಿ : ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್ಗೆ ಸಿಸಿಪಿಎ ನೋಟಿಸ್ - CAB AGGREGATORS